ನವದೆಹಲಿ, ಫೆ 18 (DaijiworldNews/DB): ಭಾರತ ತಂಡದ ಉಪ ನಾಯಕ ಕೆ.ಎಲ್. ರಾಹುಲ್ ಅವರು ಪದೇಪದೇ ಕಳಪೆ ಪ್ರದರ್ಶನ ತೋರಿಸುತ್ತಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಅದರಲ್ಲೂ ಇಂದು ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಎರಡನೇ ದಿನದಾಟದಲ್ಲಿ ರಾಹುಲ್ ಔಟಾಗುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಸಖತ್ ಟ್ರೋಲ್ ಆಗಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನಲ್ಲಿ ಇಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಕಡೆಯಿಂದ ಇನ್ನಿಂಗ್ಸ್ ಅಷ್ಟೇನೂ ಇರಲಿಲ್ಲ. ಆರಂಭದಲ್ಲೇ ನಾಥನ್ ಲಿಯಾನ್ ಎಸೆತದಲ್ಲಿ ರಾಹುಲ್ ಸೋಲೊಪ್ಪಿಕೊಂಡರು.
ಇದರಿಂದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ಗೆ ಗುರಿಯಾಗಬೇಕಾಯಿತು. ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 41 ಎಸೆತಗಳನ್ನು ಆಡಿದ ರಾಹುಲ್ 1 ಬೌಂಡರಿ ನೆರವಿನಿಂದ ಕೇವಲ 17 ರನ್ ಗಳಿಸಲಷ್ಟೇ ಶಕ್ತರಾದರು. ಮೊದಲ ಟೆಸ್ಟ್ ಪಂದ್ಯದಲ್ಲಿ 71 ಎಸೆತಗಳಲ್ಲಿ 20 ರನ್ ಪೇರಿಸಿದ್ದರು. ರಾಹುಲ್ ಅವರ ಈ ಕಳಪೆ ಪ್ರದರ್ಶನದಿಂದಾಗಿ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಿಮ್ಸ್ಗಳ ಮೂಲಕ ಟ್ರೋಲ್ ಮಾಡಿದ್ದಾರೆ.