ಲಂಡನ್, ಫೆ 14 (DaijiworldNews/DB): ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಯಾವುದೇ ತಂಡ ತಮ್ಮನ್ನು ಖರೀದಿ ಮಾಡದಕ್ಕೆ ಇಂಗ್ಲೆಂಡ್ ಬ್ಯಾಟರ್ ಡೇನಿಯಲ್ ವ್ಯಾಟ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಹೃದಯವೇ ಒಡೆದು ಹೋಯಿತು ಎಂದಿದ್ದಾರೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಅವರು, ಡಬ್ಲ್ಯುಪಿಎಲ್ನಲ್ಲಿ ಆಡುವುದು ನನ್ನ ಕನಸಾಗಿತ್ತು. ಆದರೆ ಈಗ ನನ್ನ ಹೃದಯವೇ ಒಡೆದು ಹೋಗಿದೆ ಎಂದಿದ್ದಾರೆ.
ಇನ್ನು ಭಾರತದ ಬಗ್ಗೆ ಶ್ಲಾಘಿಸಿರುವ ಅವರು, ಕ್ರಿಕೆಟ್ ಆಡಲು ಭಾರತ ಒಂದು ಅತ್ಯುತ್ತಮ ತಾಣ. ಹರಾಜಿನಲ್ಲಿ ಆಯ್ಕೆಯಾದ ಎಲ್ಲಾ ಆಟಗಾರ್ತಿಯರಿಗೂ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಡಬ್ಲ್ಯುಪಿಎಲ್ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ತಮ್ಮನ್ನು ನಮೂದಿಸಿಕೊಂಡಿದ್ದ ವ್ಯಾಟ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಮುಂದಾಗಿರಲಿಲ್ಲ. 140 ಟಿ20 ಪಂದ್ಯಗಳನ್ನು ಆಡಿರುವ 31 ವರ್ಷದ ವ್ಯಾಟ್ ಎರಡು ಶತಕ, ಹತ್ತು ಅರ್ಧ ಶತಕ ಸೇರಿ ಒಟ್ಟು 2276 ರನ್ ಗಳಿಸಿದ್ದಾರೆ. 46 ವಿಕೆಟ್ ಪಡೆದಿದ್ದಾರೆ. ಇನ್ನು ಅವರು ಆಡಿರುವ ಏಕದಿನ ಪಂದ್ಯಗಳ ಸಂಖ್ಯೆ 102.