ಮುಂಬಯಿ, ಫೆ 12 (DaijiworldNews/DB): ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿಯನ್ನೇ ಮತ್ತೊಮ್ಮೆ ವರಿಸಲಿದ್ದಾರೆ. ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಹಾರ್ದಿಕ್ ತಮ್ಮ ಪತ್ನಿಯೊಂದಿಗೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಹೌದು. ರಾಜಸ್ಥಾನದ ಉದಯ್ಪುರ್ನಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರನ್ನೇ ಹಾರ್ದಿಕ್ ಮತ್ತೊಮ್ಮೆ ಮದುವೆಯಾಗಲಿದ್ದಾರೆ. ಫೆಬ್ರವರಿ 14 ರ ಪ್ರೇಮಿಗಳ ದಿನದಂದೇ ಇವರಿಬ್ಬರು ಎರಡನೇ ಬಾರಿಗೆ ಸಪ್ತಪದಿ ತುಳಿಯಲಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಈ ವಿವಾಹದ ಹಿನ್ನೆಲೆಯಲ್ಲಿ ಫೆಬ್ರವರಿ 13ರಿಂದಲೇ ಕಾರ್ಯಕ್ರಮಗಳು ಆರಂಭವಾಗಲಿದ್ದು, ಫೆಬ್ರವರಿ 16ರವರೆಗೆ ಹಳದಿ, ಮೆಹಂದಿ, ಸಂಗೀತ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆಯಂತೆ.
2020 ರ ಮೇ 31ರಂದು ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಕೋರ್ಟ್ನಲ್ಲಿ ಕೆಲವೇ ಆತ್ಮೀಯರ ಮುಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಅಗಸ್ತ್ಯ ಎಂಬ ಮಗನಿದ್ದಾನೆ.