ನವದೆಹಲಿ, ಮಾ14(SM): ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಚಾರ್ಜ್ಶೀಟ್ ದಾಖಲಾಗಿದೆ. ವರದಕ್ಷಿಣೆ ಕಿರುಕುಳ ಮತ್ತು ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ಅವರ ವಿರುದ್ಧ ದೂರು ನೀಡಲಾಗಿತ್ತು.
ಕೋಲ್ಕತ್ತಾದ ಮಹಿಳಾ ದೂರು ಸೆಲ್, ಶಮಿ ಮೇಲೆ ದೂರು ದಾಖಲಿಸಿಕೊಂಡಿದೆ. ಶಮಿ ಅಥವಾ ಅವರ ಸಂಬಂಧಿಕರು ಕಿರುಕುಳ ನೀಡಿರುವ ಆರೋಪ ಹೊರಿಸಲಾಗಿದೆ. ಇದಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 498A ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ 354A ದೂರುಗಳು ದಾಖಲಿಸಲಾಗಿವೆ.
ಶಮಿ ಹೆಂಡತಿ ಹಸಿನ್ ಜಹಾನ್ ಈ ದೂರು ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ ಶಮಿ ಸಹೋದರ ಹಸಿಬ್ ಅಹ್ಮದ್ ಹೆಸರು ಕೂಡ ಇದೆ ಎನ್ನಲಾಗಿದೆ. ದಾಂಪತ್ಯ ಕಲಹದಿಂದಾಗಿ ಸಮಸ್ಯೆಯನ್ನೆದುರಿಸಿದ್ದ ಶಮಿ ಕೊಂಚ ಕಾಲ ನಿರಾಳರಾಗಿ ಕ್ರಿಕೆಟ್ ಕಡೆ ಗಮನ ಹರಿಸಿದ್ದರು.
ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಶಮಿ ಕ್ರೀಡಾಂಗಣಕ್ಕಿಳಿದಿದ್ದರು. ಅಲ್ಲದೆ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಮಿ ಪತ್ನಿ ಜಹಾನ್ ಶಮಿ ವಿರುದ್ಧ ಮತ್ತೆ ದೂರು ದಾಖಲಿಸಿದ್ದಾರೆ. ಇದರಿಂದ ಶಮಿ ಅವರ ಕ್ರಿಕೆಟ್ ಕೆರಿಯರ್ ಗೆ ಮತ್ತೆ ಹೊಡೆತವನ್ನು ನೀಡುವ ಸಾಧ್ಯತೆ ಇದೆ.