ನವದೆಹಲಿ, ಫೆ. 11 (DaijiworldNews/SM) : ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ನಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಇನ್ನಿಂಗ್ಸ್ ಮತ್ತು 132 ರನ್ಗಳಿಂದ ಸೋಲಿಸಿದ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನ ಫೈನಲ್ ಗೆ ಮತ್ತಷ್ಟು ಸನಿಹವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ 2023ರ ಮೊದಲ ಟೆಸ್ಟ್ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಿತು. ಇದರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮತ್ತು 132 ರನ್ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತ ತಂಡ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 132 ರನ್ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಶನಿವಾರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ಸ್ಥಾನ ಪಡೆಯುವತ್ತ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಗೆಲುವಿನೊಂದಿಗೆ ಭಾರತವು ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು ಮಾತ್ರವಲ್ಲದೇ WTC ಪಾಯಿಂಟ್ಗಳ ಪಟ್ಟಿಯಲ್ಲಿ ತನ್ನ ಗೆಲುವಿನ ಶೇಕಡಾವಾರು ಪ್ರಮಾಣವನ್ನೂ ಹೆಚ್ಚಿಸಿಕೊಂಡಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಇನ್ನು ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ನಿಂದಾಗಿ ಕಾಂಗರೂ ತಂಡ 177 ರನ್ಗಳಿಗೆ ಕುಸಿಯಿತು. ಮೊದಲ ಇನ್ನಿಂಗ್ಸ್ನಲ್ಲಿ ಜಡೇಜಾ 5 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ 1-1 ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ರೋಹಿತ್ ಶರ್ಮಾ ಅವರ ಶತಕ (120), ಜಡೇಜಾ ಮತ್ತು ಅಕ್ಷರ್ ಅವರ ಅರ್ಧಶತಕಗಳ ನೆರವಿನಿಂದ 400 ರನ್ ಗಳಿಸಿ, 223 ರನ್ ಮುನ್ನಡೆ ಸಾಧಿಸಿತು. ಹೀಗಿರುವಾಗ ಪಂದ್ಯದ ಮೂರನೇ ದಿನ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಸ್ಪಿನ್ನ ಮುಂದೆ ಮುಗ್ಗರಿಸಿತು. ಅಶ್ವಿನ್ 5 ವಿಕೆಟ್ ಪಡೆದು ತಲ್ಲಣ ಮೂಡಿಸಿದರು. ಆಸ್ಟ್ರೇಲಿಯ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 91 ರನ್ ಗಳಿಸಿ ಆಲೌಟ್ ಆಗಿತ್ತು. ಇದರಿಂದಾಗಿ ಭಾರತ ಇನ್ನಿಂಗ್ಸ್ ಮತ್ತು 132 ರನ್ಗಳ ಜಯ ಸಾಧಿಸಿತು.