ದೆಹಲಿ, ಮಾ 13(SM): ಫಿರೋಜ್ ಶಾ ಕೋಟ್ಲ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.
ಆರಂಭದ ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಭಾರತವನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ಆಸಿಸ್ ಬಳಿಕದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.
ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಪೇರಿಸಲು ಶಕ್ತವಾಯಿತು. ಆಸಿಸ್ ತಂಡ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ್ದ ಭಾರತ 50 ಓವರ್ ಗಳಲ್ಲಿ 237 ರನ್ ಗಳಿಗೆ ಸರ್ವ ಪತನ ಕಂಡಿತು. ಭಾರತದ ಪರ ರೋಹಿತ್ ಶರ್ಮ 56 ರನ್ ಸಿಡಿಸಿದರೆ, ಭುವನೇಶ್ವರ್ ಕುಮಾರ್ 46 ಹಾಗೂ ಕೇದರ್ ಜಾದವ್ 44 ರನ್ ಗಳನ್ನು ಪೇರಿಸಲು ಶಕ್ತರಾದರು. ಉಳಿದಂತೆ ಯಾವೊಬ್ಬರೂ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
4ನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಧವನ್ 12 ರನ್ ಪೇರಿಸಲಷ್ಟೇ ಶಕ್ತರಾದರು. ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕನ ಆಟವೂ ಕೂಡ ನಡೆಯದಾಯಿತು. ಅಂತಿಮವಾಗಿ ಪಂದ್ಯವನ್ನು ಕೈಚೆಲ್ಲಿ, ಸರ್ವ ಪತನಗೊಂಡು ೩೫ ರನ್ ಗಳ ಸೋಲನುಭವಿಸಿತು.
ಆಸ್ಟ್ರೇಲಿಯಾ ಪರ ಆದಂ ಝಂಪಾ 3 ವಿಕೆಟ್ ಪಡೆದು ಮಿಂಚಿದರು.
ಇನ್ನು ಮೊದಲು ಬ್ಯಾಟ್ ಮಾಡಿದ್ದ ಅಸಿಸ್ ಪಡೆ ಉಸ್ಮಾನ್ ಶತಕ ಹಾಗೂ ಪೀಟರ್ ಅವರ ಅರ್ಧಶತಕದ ನೆರವಿನಿಂದ 272 ರನ್ ಪೇರಿಸಲು ಶಕ್ತವಾಯಿತು. ಇನ್ನು ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆಯುವ ಮೂಲಕ ಅಲ್ ರೌಂಡರ್ ಪ್ರದರ್ಶನ ನೀಡಿದರು.
ಅಂತಿಮ ಪಂದ್ಯ ಗೆಲ್ಲುವ ಮೂಲಕ ಆಸ್ಟ್ರೇಲಿಯಾ 3-2 ಅಂತರದಲ್ಲಿ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.