ನವದೆಹಲಿ,ಫೆ 04 ( DaijiworldNews/MS): ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿಷೇಧಿತ ವಸ್ತು ಬಳಸಿರುವುದು ಸಾಬೀತಾಗಿದ್ದು ಈ ಹಿನ್ನಲೆ 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಿದೆ.
ಕರ್ಮಾಕರ್ ವಿಶ್ವ ಡೋಪಿಂಗ್ ಎಜೆನ್ಸಿ ನಿಷೇಧಿತ ವಸ್ತುಗಳಲ್ಲಿ ಸೇರಿಸಿರುವ ಹಿಜನಮೈನ್(S3. ಬೀಟಾ-2 ಅಗೊನಿಸ್ಟ್) ಸೇವಿಸಿರುವುದು ಡೋಪಿಂಗ್ ಟೆಸ್ಟ್ನಲ್ಲಿ ಸಾಬೀತಾಗಿದ್ದು. ಕರ್ಮಾಕರ್ ವರದಿ ಪಾಸಿಟೀವ್ ಬಂದಿದೆ.
ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ ದೀಪಾ ಕರ್ಮಾಕರ್ ಶಿಕ್ಷೆ ಪ್ರಕಟಿಸಿದೆ. 2021ರ ಅಕ್ಟೋಬರ್ 11 ರಂದು ದೀಪಾ ಕರ್ಮಾಕರ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಫಲಿತಾಂಶ ಹೊರಬಿದ್ದಿತ್ತು. ಇದೀಗ ಶಿಕ್ಷೆ ಪ್ರಮಾಣ ಪ್ರಕಟಗೊಂಡಿದೆ. ಇಷ್ಟೇ ಅಲ್ಲ ಅಕ್ಟೋಬರ್ 11, 2021ರಂದು ದೀಪಾ ಕರ್ಮಾಕರ್ ಪಾಲ್ಗೊಂಡ ಕ್ರೀಡೆ ಫಲಿತಾಂಶಗಳನ್ನ ಅನರ್ಹಗೊಳಿಸಲಾಗಿದೆ.
2021ರ ಅಕ್ಟೋಬರ್ನಿಂದ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲು ದೀಪಾ ಕರ್ಮಾಕರ್ಗೆ ಅವಕಾಶ ಇರಲಿಲ್ಲ. ಹೀಗಾಗಿ ಶಿಕ್ಷೆಯ ಬಹುತೇಕ ಭಾಗವನ್ನು ದೀಪಾ ಕರ್ಮಾಕರ್ ಈಗಾಗಲೇ ಪೂರೈಸಿದ್ದಾರೆ. 21 ತಿಂಗಳ ಕಾಲ ಶಿಕ್ಷೆ ಇದೇ ಜುಲೈ ತಿಂಗಳ 10ನೇ ತಾರಿಕಿಗೆ ಅಂತ್ಯಗೊಳ್ಳಲಿದೆ.
ತ್ರಿಪುರಾದ ದೀಪಾ ಭಾರತದ ಅಗ್ರ ಜಿಮ್ನಾಸ್ಟ್. 2016ರ ರಿಯೊ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2018 ರಲ್ಲಿ, ಅವರು ಟರ್ಕಿಯ ಮರ್ಸಿನ್ನಲ್ಲಿ ನಡೆದ FIG ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್ನ ವಾಲ್ಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದು. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.