ನವದೆಹಲಿ, ಜ 25 (DaijiworldNews/DB): ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಪೈಕಿ ಯಾರನ್ನು ಆಯ್ಕೆ ಮಾಡುವಿರಿ ಎಂದು ಭಾರತ ತಂಡದ ಆರಂಭಿಕ ಆಟಗಾರ 23 ವರ್ಷದ ಶುಭಮನ್ ಗಿಲ್ ಅವರಿಗೆ ಪ್ರಶ್ನೆಯೊಂದು ಎದುರಾಗಿತ್ತು. ಈ ಸಂದಿಗ್ದ ಪ್ರಶ್ನೆಗೆ ಒಂಚೂರೂ ಯೋಚಿಸದೆ ವಿರಾಟ್ ಕೊಹ್ಲಿ ಎಂದಿದ್ದರು ಗಿಲ್. ಹಾಗಿದ್ರೆ ಕೊಹ್ಲಿಯನ್ನೇ ಗಿಲ್ ಆಯ್ಕೆ ಮಾಡಿದ್ದೇಕೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ ಗಿಲ್.
ಇಂದೋರ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಜಯ ಗಳಿಸಿದ ಬಳಿಕ 112 ರನ್ ಮೂಲಕ ಶತಕ ಬಾರಿಸಿದ ಶುಭಮನ್ ಗಿಲ್ ಅವರಿಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಈ ಪ್ರಶ್ನೆ ಎದುರಾಯಿತು. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಲ್ಲಿ ಯಾರನ್ನು ಆಯ್ಕೆ ಮಾಡುವಿರಿ ಎಂಬ ಸಂದಿಗ್ದ ಪ್ರಶ್ನೆ ಗಿಲ್ ಮುಂದೆ ಬಂದಿತ್ತು. ಆದರೆ ಗಿಲ್ ಮಾತ್ರ ಸ್ವಲ್ಪವೂ ತಡವರಿಸದೆ ವಿರಾಟ್ ಭಾಯ್ ಎಂದು ಬಿಟ್ಟರು. ಅದಕ್ಕೆ ಕಾರಣವನ್ನೂ ಅವರು ವಿವರಿಸಿದರು.
ನನ್ನ ತಂದೆ ಸಚಿನ್ ಸರ್ ಅವರ ಅಭಿಮಾನಿ. ಬಹುಶಃ ನಾನು ಕ್ರಿಕೆಟ್ ಆಡಲು ಆರಂಭಿಸಲು ಕಾರಣವೇ ಸಚಿನ್ ತೆಂಡೂಲ್ಕರ್. ಅವರು ಕ್ರಿಕೆಟ್ನಿಂದ ನಿವೃತ್ತಿ ಪಡೆದಾಗ ನಾನು ಚಿಕ್ಕವನಾಗಿದ್ದೆ ಮತ್ತು ಕ್ರಿಕೆಟ್ನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿರಲಿಲ್ಲ. ಆದರೆ ನಾನು ಕ್ರಿಕೆಟ್ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಳಿಕ ವಿರಾಟ್ ಭಾಯ್ ಅವರಿಂದ ತುಂಬಾ ಕಲಿತೆ. ಈಗಲೂ ಕಲಿಯುತ್ತಿದ್ದೇನೆ. ಒಬ್ಬ ಬ್ಯಾಟರ್ ಆಗಿ ಬೆಳೆಯಲು ಅವರಿಂದ ಕಲಿತಿರುವುದೇ ಕಾರಣ ಎಂದರು.