ಹೈದರಾಬಾದ್, ಜ. 18 (DaijiworldNews/SM): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಿದೆ.
ಶುಭ್ ಮನ್ ಗಿಲ್ ಅವರ ಭರ್ಜರಿ ದ್ವಿಶತಕ ಮತ್ತು ಮೊಹಮ್ಮದ್ ಸಿರಾಜ್ ಅವರ ಅಮೋಘ ನಾಲ್ಕು ವಿಕೆಟ್ ಗಳ ನೆರವಿನಿಂದ ಭಾರತ 12 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.
ಹೈದರಾಬಾದ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಮಾಡಿತು.
ಟೀಂ ಇಂಡಿಯಾ ಪರ ಶುಭ್ ಮನ್ ಗಿಲ್(208) ದ್ವಿಶತಕ ಸಿಡಿಸಿದರು. ಅದರ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿ ನ್ಯೂಜಿಲೆಂಡ್ ಗೆಲ್ಲಲು 350 ರನ್ ಗಳ ಬೃಹತ್ ಗುರಿ ನೀಡಿತು.
ಬೃಹತ್ ಗುರಿ ಬೆನ್ನತ್ತಿದ ಪ್ರವಾಸಿ ತಂಡ, ಮೈಕಲ್ ಬ್ರೇಸ್ ವೆಲ್ ಅವರ ಭರ್ಜರಿ ಶತಕದ ಹೊರತಾಗಿಯೂ 49.2 ಓವರ್ ಗಳಲ್ಲಿ 337 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಸೋಲಪ್ಪಿಕೊಂಡಿತು. ಇದರೊಂದಿಗೆ ಬ್ರೇಸ್ ವೆಲ್ ಅವರ ಹೋರಾಟ ವ್ಯರ್ಥವಾಯಿತು. ಬ್ರೇಸ್ ವೆಲ್ ಅವರು 78 ಎಸೆತಗಳಲ್ಲಿ 12 ಬೌಂಡರಿ ಹಾಗೂ 10 ಸಿಕ್ಸರ್ ಗಳ ನೆರವಿನಿಂದ 140 ರನ್ ಗಳಿಸಿದರು.
ಭಾರತದ ಪರ ಮೊಹ್ಮದ್ ಸಿರಾಜ್ ಅವರು 10 ಓವರ್ ಗಳಲ್ಲಿ 46 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರು ತಲಾ ಎರಡು ವಿಕೆಟ್ ಪಡೆದರು.