ಹೈದರಾಬಾದ್, ಜ 18 (DaijiworldNews/SM): ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಅಬ್ಬರಿಸಿದ್ದಾರೆ. ಭರ್ಜರಿ ಬ್ಯಾಟಿಂಗ್ ನಡೆಸಿದ ಅವರು ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ, ಭಾರತ ತಂಡ ಪ್ರವಾಸಿ ತಂಡಕ್ಕೆ ಗೆಲ್ಲಲು 350ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿಗ ಭಾರತ ತಂಡ ಶುಭ್ ಮನ್ ಗಿಲ್ (208 ರನ್) ದ್ವಿಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿ ನ್ಯೂಜಿಲೆಂಡ್ ಗೆ ಗೆಲ್ಲಲು 350 ರನ್ ಗಳ ಬೃಹತ್ ಗುರಿ ನೀಡಿದೆ.
ಭಾರತದ ಪರ ನಾಯಕ ರೋಹಿತ್ ಶರ್ಮಾ 34 ರನ್ ಗಳಿಸಿದರೆ, ರನ್ ಮೆಶಿನ್ ವಿರಾಟ್ ಕೊಹ್ಲಿ ಕೇವಲ 8 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಹಾರ್ದಿಕ್ ಪಾಂಡ್ಯಾ 28 ಮತ್ತು ಸೂರ್ಯ ಕುಮಾರ್ ಯಾದವ್ 31 ರನ್ ಗಳಿಸಿ ಗಿಲ್ ಗೆ ಉತ್ತಮ ಸಾಥ್ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (5) ಅಂತಿಮ ಹಂತದಲ್ಲಿ ವಾಷಿಂಹಗ್ಟನ್ ಸುಂದರ್ (12), ಶಾರ್ದೂಲ್ ಠಾಕೂರ್ (3) ವಿಕೆಟ್ ಬೇಗನೆ ಬಿದ್ದಿದ್ದು ಭಾರತಕ್ಕೆ ಹಿನ್ನಡೆಯಾಯಿತು. ಇಲ್ಲವಾದಲ್ಲಿ ಭಾರತದ ಸ್ಕೋರ್ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇತ್ತು.
ಆದಾಗ್ಯೂ ಶುಭ್ ಮನ್ ಗಿಲ್ ಅವರ ದಾಖಲೆಯ ದ್ವಿಶತಕ ಭಾರತಕ್ಕೆ ಬೃಹತ್ ರನ್ ಗಳ ಬಲ ನೀಡಿದೆ. ನ್ಯೂಜಿಲೆಂಡ್ ಪರ ಹೆನ್ರಿ ಶಿಪ್ಲೆ ಮತ್ತು ಡರಿಲ್ ಮಿಚೆಲ್ ತಲಾ 2 ವಿಕೆಟ್ ಪಡೆದರೆ, ಫರ್ಗುಸನ್, ಟಿಕ್ನರ್ ಮತ್ತು ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದರು.