ಮುಂಬೈ, ಜ 15 (DaijiworldNews/DB): ಭಾರತೀಯ ಕ್ರಿಕೆಟ್ನಲ್ಲಿ ಇದೀಗ ಮದುವೆ ಸಂಭ್ರಮಗಳದ್ದೇ ಸುದ್ದಿ. ಕೆ.ಎಲ್. ರಾಹುಲ್ ಅವರ ಮದುವೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಇನ್ನೊಬ್ಬ ಸ್ಟಾರ್ ಕ್ರಿಕೆಟಿಗನ ಮದುವೆ ಸುದ್ದಿ ಹೊರ ಬಂದಿದೆ.
ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಶೀಘ್ರವೇ ತಮ್ಮ ಬಹು ದಿನಗಳ ಗೆಳತಿ ಮೇಹಾ ಪಟೇಲ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಇದೇ ತಿಂಗಳು ಅಕ್ಷರ್-ಮೇಹಾ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ಅಕ್ಷರ್ಗೆ ಬಿಸಿಸಿಐ ವಿಶ್ರಾಂತಿ ನೀಡಿದೆ ಎಂದೂ ಹೇಳಲಾಗುತ್ತಿದೆ.
ಅಕ್ಷರ್ ಮತ್ತು ಮೇಹಾ ಕಳೆದ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಕಳೆದ ವರ್ಷ ಜನವರಿ 20ರಂದು ತಮ್ಮ ಹುಟ್ಟು ಹಬ್ಬದ ದಿನದಂದೇ ಮೇಹಾಗೆ ಅಕ್ಷರ್ ಪ್ರಪೋಸ್ ಮಾಡಿದ ಬಳಿಕ ಅವರಿಬ್ಬರ ಪ್ರೀತಿ ಅಧಿಕೃತಗೊಂಡಿತ್ತು. ವೃತ್ತಿಯಲ್ಲಿ ಡಯಟಿಷಿಯನ್ ಮತ್ತು ಪೌಷ್ಠಿಕ ತಜ್ಞರಾಗಿರುವ ಮೇಹಾ ತಮ್ಮ ಕೈ ಮೇಲೆ ಅಕ್ಷ್ ಎಂಬದಾಗಿ ಇಂಗ್ಲಿಷ್ನಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಇನ್ನು ಇದೇ ತಿಂಗಳು ಇವರಿಬ್ಬರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆಯಾದರೂ, ಮದುವೆ ದಿನಾಂಕ ಗೊತ್ತಾಗಿಲ್ಲ. ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ವಿವಾಹದ ಬೆನ್ನಲ್ಲೇ ಅಕ್ಷರ್ ಪಟೇಲ್-ಮೇಹಾ ಪಟೇಲ್ ವಿವಾಹವೂ ನಡೆಯುತ್ತಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ತಂದಿದೆ.