ನವದೆಹಲಿ, ಜ 11 (DaijiworldNews/DB): ಮಹಿಳಾ ಅಂಪಾಯರ್ಗಳಿಗೆ ಅವಕಾಶ ನೀಡುವ ಯೋಜನೆಯೇನೋ ಬಿಸಿಸಿಐ ಮುಂದಿದೆ. ಆದರೆ ನೋಂದಾಯಿತ 150 ಮಹಿಳಾ ಅಂಪಾಯರ್ಗಳ ಪೈಕಿ ಅವಕಾಶ ಗಿಟ್ಟಿಸಿಕೊಂಡವರು ಕೇವಲ ಮೂವರು!
ಹೌದು. ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಮಹಿಳಾ ಅಂಪಾಯರ್ಗಳಿಗೆ ಅವಕಾಶ ಹೆಚ್ಚಿದೆ. ಪುರುಷರ ಕ್ರಿಕೆಟ್ನಲ್ಲಿಯೂ ಮಹಿಳಾ ಅಂಪಾಯರ್ಗಳಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ಮಹಿಳಾ ಅಂಪಾಯರ್ಗಳಿಗೆ ಅವಕಾಶ ನೀಡಬೇಕೆಂಬ ಬಿಸಿಸಿಐ ಯೋಜನೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಕಾರ್ಯಗತಗೊಂಡಿಲ್ಲ. 150 ಮಂದಿ ಮಹಿಳಾ ಅಂಪಾಯರ್ಗಳು ನೋಂದಾಯಿಸಿಕೊಂಡಿದ್ದರೂ, ಕೇವಲ ಮೂರು ಮಂದಿ ಅವಕಾಶ ಪಡೆದುಕೊಂಡಿದ್ದಾರೆ.
2022-23ನೇ ಸಾಲಿನ ರಣಜಿ ಕ್ರಿಕೆಟ್ ಪಂದ್ಯಾವಳಿಯ 5ನೇ ಸುತ್ತಿನ ಆಟ ಮಂಗಳವಾರ (ನಿನ್ನೆ) ಆರಂಭಗೊಂಡಿದ್ದು, ಈ ಪಂದ್ಯಾವಳಿಯಲ್ಲಿ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಂಪಾಯರ್ಗಳು ತೀರ್ಪು ನೀಡಲು ಮೈದಾನಕ್ಕಿಳಿದಿದ್ದಾರೆ. ಆ ಮೂಲಕ ಮೂವರು ವನಿತೆಯರು ಅಂಪಾಯರ್ಗಳಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವೃಂದಾ ರತಿ, ಜನನಿ ನಾರಾಯಣನ್ ಹಾಗೂ ಗಾಯತ್ರಿ ವೇಣುಗೋಪಾಲನ್ ಅವರೇ ಅಂಪಾಯರ್ಗಳಾಗಿ ಮೈದಾನಕ್ಕಿಳಿದ ವನಿತೆಯರು.
ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಕ್ರಿಕೆಟರ್ ಆಗಿದ್ದ ವೃಂದಾ ರತಿ ಗೋವಾ-ಪುದುಚೇರಿ ನಡುವಿನ ಪಂದ್ಯದಲ್ಲಿ ತೀರ್ಪು ನೀಡಲು ಆಯ್ಕೆಯಾದರು. ಇವರು ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ಇನ್ನು ಜನನಿ ನಾರಾಯಣನ್ ಅವರು ರೈಲ್ವೇಸ್- ತ್ರಿಪುರ ನಡುವಿನ ಸೂರತ್ ಪಂದ್ಯದಲ್ಲಿ, ಗಾಯತ್ರಿ ವೇಣುಗೋಪಾಲ್ ಜಮ್ಶೆಡ್ಪುರದಲ್ಲಿ ಆರಂಭಗೊಂಡ ಜಾರ್ಖಂಡ್-ಛತ್ತೀಸ್ಗಢ ನಡುವಿನ ಪಂದ್ಯದಲ್ಲಿ ತೀರ್ಪು ನೀಡಲು ಮೈದಾನಕ್ಕಿಳಿದಿದ್ದಾರೆ.