ನವದೆಹಲಿ, ಜ 10 (DaijiworldNews/DB): ಟಿ20 ಕ್ರಿಕೆಟ್ನಲ್ಲಿ ಮುಂದುವರಿಯುವುದಾಗಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಅವರನ್ನು ಟಿ20 ಆಯ್ಕೆಗೆ ಪರಿಗಣಿಸುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಎರಡು ಸರಣಿಗಳಲ್ಲಿ ನಾಯಕತ್ವ ವಹಿಸಿ ತಂಡವನ್ನು ಗೆಲ್ಲಿಸಿದ ಹಾರ್ದಿಕ್ ಪಾಂಡ್ಯಾ ಅವರನ್ನೇ ನಾಯಕನಾಗಿ ಬಿಸಿಸಿಐ ಮುಂದುವರಿಸಲಿದೆ ಎಂಬ ಸುದ್ದಿಗಳೂ ಹರಡುತ್ತಿವೆ. ಈ ನಡುವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, ವಿಶ್ರಾಂತಿ ಸಲುವಾಗಿ ಹೊರಗುಳಿದಿದ್ದೇನೆಯೇ ಹೊರತು ಟಿ20 ಆಡುವುದೇ ಇಲ್ಲವೆಂಬ ಕಾರಣಕ್ಕಾಗಿ ಅಲ್ಲ. ಟಿ20ಯಲ್ಲಿ ನಾನು ಮುಂದುವರಿಯಲಿದ್ದೇನೆ ಎಂದರು.
ಎಲ್ಲಾ ಮಾದರಿಯ ಕ್ರಿಕೆಟ್ ಆಡುವ ಆಟಗಾರರಿಗೆ ಬ್ಯಾಕ್ ಟು ಬ್ಯಾಕ್ ಆಡುವುದಕ್ಕೆ ಸಾಧ್ಯವಾಗುವುದಿಲ್ಲ. ಸಾಕಷ್ಟು ವಿಶ್ರಾಂತಿ ಬೇಕಾಗುತ್ತದೆ. ವಿಶ್ರಾಂತಿ ಅಗತ್ಯವುಳ್ಳವರಲ್ಲಿ ನಾನೂ ಒಬ್ಬ. ಐಪಿಎಲ್ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಇದೇ ವೇಳೆ ಶರ್ಮಾ ತಿಳಿಸಿದರು.
35 ವರ್ಷದ ರೋಹಿತ್ ಶರ್ಮಾ ಜನವರಿ 10ರಿಂದ ನಡೆಯುವ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿ ಅವರಿಗೆ ಸವಾಲಾಗಿದ್ದು, ಇಲ್ಲಿ ಉತ್ತಮ ಪ್ರದರ್ಶನ ತೋರಿದ್ದಲ್ಲಿ ಅವಕಾಶ ಹೆಚ್ಚಲಿದೆ. ಒಂದು ವೇಳೆ ಇದರಲ್ಲಿ ಅವರ ಪ್ರದರ್ಶನ ಕಡಿಮೆಯಾಗಿದ್ದಲ್ಲಿ ಮುಂದಿನ ದಿನಗಳಲ್ಲಿ ಟಿ20ಯಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.