ನವದೆಹಲಿ, ಜ 07 (DaijiworldNews/DB): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್ಗೆ ವಿದಾಯ ಘೋಷಣೆ ಮಾಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ದುಬೈ ಡ್ಯೂಟಿ ಚಾಂಪಿಯನ್ಶಿಪ್ ಟೂರ್ನಮೆಂಟ್ ಬಳಿಕ ವೃತ್ತಿ ಬದುಕಿನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಅವರು ಘೋಷಿಸಿದ್ದಾರೆ.
36 ವರ್ಷದ ಸಾನಿಯಾ ಕಳೆದ ವರ್ಷ ಯುಎಸ್ ಓಪನ್ ನಂತರ ಟೆನಿಸ್ ವೃತ್ತಿ ಜೀವನದಿಂದ ನಿವೃತ್ತಿಯಾಗುವ ಬಗ್ಗೆ ನಿರ್ಧರಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದ ಆ ಪಂದ್ಯದಲ್ಲಿ ಆಡಲು ಅವರಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂದಿನ ತಿಂಗಳು ನಡೆಯುವ ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್ ಶಿಪ್ನಲ್ಲಿ ಆಡುವ ಮೂಲಕ ಅಲ್ಲಿಗೆ ತಮ್ಮ ವೃತ್ತಿ ಬದುಕನ್ನು ಕೊನೆಗೊಳಿಸಲಿದ್ದಾರೆ.
ಕಳೆದೊಂದು ದಶಕದಿಂದ ದುಬೈಯಲ್ಲಿ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ಪಾಕಿಸ್ತಾನಿ ಕ್ರಿಕೆಟಿಗ್ ಶೋಯೆಬ್ ಮಲಿಕ್ ಅವರನ್ನು ವಿವಾಹವಾದ ಬಳಿಕವೂ ಭಾರತಕ್ಕಾಗಿ ತಮ್ಮ ಟೆನಿಸ್ ಆಟವನ್ನು ಮುಂದುವರಿಸಿದ್ದರು.
ಆರು ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಸಾನಿಯಾ, 2016 ರಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. 2005ರಲ್ಲಿ ತವರು ಕ್ಷೇತ್ರ ಹೈದರಾಬಾದ್ನಲ್ಲಿ ಪಂದ್ಯ ಗೆಲ್ಲುವ ಮೂಲಕ ಡಬ್ಲ್ಯೂಟಿಎ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2007ರ ವೇಳೆಗೆ ಅವರು ಅಗ್ರ 30ರೊಳಗೆ ಪ್ರವೇಶಿಸಿದರು ಮತ್ತು ವಿಶ್ವದ 27ನೇ ಶ್ರೇಯಾಂಕವನ್ನು ಪಡೆದರು.