ರೂರ್ಕೆಲಾ(ಒಡಿಶಾ), ಜ 06 (DaijiworldNews/DB): ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣವಾದ ಒಡಿಶಾದ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಈ ಕ್ರೀಡಾಂಗಣವು ದೇಶದಲ್ಲೇ ಅತಿ ದೊಡ್ಡ ಹಾಕಿ ಕ್ರೀಡಾಂಗಣವಾಗಿರುವುದರಿಂದ ರಾಷ್ಟ್ರಕ್ಕೆ ಇದು ಒಡಿಶಾದ ಕೊಡುಗೆಯಾಗಿದೆ. ಜನವರಿ 13ರಿಂದ ಆರಂಭವಾಗುವ ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ಗೂ ಮುನ್ನವೇ ಕ್ರೀಡಾಂಗಣವನ್ನು ಬಳಕೆಗೆ ಮುಕ್ತಗೊಳಿಸಲಾಗುವುದು ಎಂಬ ಭರವಸೆಯನ್ನು ಈಡೇರಿಸಲಾಗಿದೆ ಎಂದು ಸಿಎಂ ಪಾಟ್ನಾಯಕ್ ಹೇಳಿದರು.
ಜನವರಿ 13ರಂದು ಇದೇ ಸ್ಟೇಡಿಯಂನಲ್ಲಿ ಇಲ್ಲಿ ನಡೆಯುವ ಪುರುಷರ ಹಾಕಿ ವಿಶ್ವಕಪ್ನಲ್ಲಿ ಸ್ಪೇನ್ ವಿರುದ್ದ ಇದೇ ಕ್ರೀಡಾಂಗಣದಲ್ಲಿ ಭಾರತ ಹಾಕಿ ತಂಡದ ಆಟಗಾರರು ಸೆಣಸಾಡಲಿದ್ದಾರೆ. ಬಳಿಕ ಇಂಗ್ಲೆಂಡ್ ವಿರುದ್ದದ ಪಂದ್ಯವೂ ಇಲ್ಲೇ ನಡೆಯಲಿದೆ. 44 ಪಂದ್ಯಗಳ ಪೈಕಿ 20 ಪಂದ್ಯಗಳಿಗೆ ರೂರ್ಕೆಲಾ ಆತಿಥ್ಯ ವಹಿಸಲಿದೆ. ಇನ್ನು ಅಂತಿಮ ಪಂದ್ಯ ಸಹಿತ ಉಳಿದೆಲ್ಲಾ ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಇಡಲಾಗಿದ್ದು, ಬಿಜು ಪಟ್ನಾಯಕ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ಯಾಂಪಸ್ನಲ್ಲಿ 15 ಎಕರೆ ಜಾಗದಲ್ಲಿ ಒಟ್ಟು 146 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡಿದೆ. 21 ಸಾವಿರ ಮಂದಿ ವೀಕ್ಷಿಸಬಹುದಾದ ಸಾಮರ್ಥ್ಯವನ್ನು ಈ ಕ್ರೀಡಾಂಗಣ ಹೊಂದಿದೆ. ಒಡಿಶಾ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಕ್ರೀಡಾಂಗಣವನ್ನು ನಿರ್ಮಿಸಿದೆ.