ರಾಂಚಿ, ಮಾ 09(SM): ಭಾರತದ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಗೆ ಚೆಲ್ಲಿದ್ದು, ಸರಣಿಯನ್ನು ಜೀವಂತವಾಗಿರಿಸಿದೆ. ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಕಾಂಗರೂ ಪಡೆ 314 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು.
ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲೇ ಎಡವಿತು. ಮತ್ತೆ ಆರಂಭಿಕರು ರನ್ ಪೇರಿಸುವಲ್ಲಿ ವಿಫಲರಾದರು. ಆದರೆ, ನಾಯಕ ವಿರಾಟ್ ಮಾತ್ರ ಜವಾಬ್ದಾರಿಯುತ ಆಟವನ್ನಾಡುವ ಮೂಲಕ ತಂಡಕ್ಕೆ ನೆರವಾದರಾದರು. ಆದರೂ ಗೆಲುವು ಮಾತ್ರ ಬ್ಲೂ ಬಾಯ್ಸ್ ಪಾಲಿಗೆ ದೂರದಲ್ಲೇ ಇತ್ತು. ನಾಯಕ ವಿರಾಟ್ ಕೊಹ್ಲಿ 123 ರನ್ ಗಳನ್ನು ಪೇರಿಸಿ ಮತ್ತೊಮ್ಮೆ ಮಿಂಚಿದರು. ಆದರೆ ಮಧ್ಯಮ ಕ್ರಮಾಂಕದಲ್ಲೂ ನಿರೀಕ್ಷೆಯ ಫಲಿತಾಂಶ ಲಭಿಸಲಿಲ್ಲ. ವಿಜಯ್ ಶಂಕರ್ 32 ರನ್ ಪೇರಿಸಿದರೆ, ಎಂ.ಎಸ್. ಧೋನಿ ಹಾಗೂ ಕೇದಾರ್ ಜಾದರ್ ತಲಾ 26 ರನ್ ಸಿಡಿಸಿದರು. ಅಂತಿಮವಾಗಿ ಟೀಂ ಇಂಡಿಯಾ 48.2 ಓವರ್ ಗಳಲ್ಲಿ 281 ರನ್ ಗಳಿಗೆ ಸರ್ವ ಪತನಗೊಂಡು ಆಸ್ಟ್ರೇಲಿಯಾಕ್ಕೆ ಶರಣಾಯಿತು.
ಆಸ್ಟ್ರೇಲಿಯಾ ಪರ ಪಟ್ ಕಮ್ಮಿನ್ಸ್, ರಿಚರ್ಡ್ ಸನ್ ಹಾಗೂ ಅದಂ ಝಂಪಾ ತಲಾ 3 ವಿಕೆಟ್ ಗಳನ್ನು ಪಡೆದರು.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಕಾಂಗರೂ ಪಡೆಗೆ ಆರಂಭಿಕರಾದ ಅರೊನ್ ಪಿಂಚ್(93), ಉಸ್ಮನ್ ಖಾವಜಾ(104) ರನ್ ಗಳನ್ನು ಪೇರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಭಾರತದ ಪರ ಕುಲ್ ದೀಪ್ ಯಾದವ್ 3 ವಿಕೆಟ್ ಗಳನ್ನು ಕಬಳಿಸಿದರೆ, ಶಮಿ 1 ವಿಕೆಟ್ ಪಡೆದರು.
ಅಂತಿಮವಾಗಿ ಕೊಹ್ಲಿ ಪಡೆ 32ರನ್ ಗಳ ಅಂತರದಿಂದ ಆಸ್ಟ್ರೇಲಿಯಾಕ್ಕೆ ಶರಣಾಯಿತು. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರವನ್ನು ಕಾಯ್ದುಕೊಂಡಿದೆ.