ನವದೆಹಲಿ, ಜ 04 (DaijiworldNews/DB): ನೇಪಾಳಿ ಕ್ರಿಕೆಟ್ ಲೀಗ್ ನಡೆಯುತ್ತಿರುವಂತೆಯೇ ಆಯೋಜಕರು ದೇಶವನ್ನೇ ಬಿಟ್ಟು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಸಿಗದೇ ಆಡಲಾರೆವು ಎಂದು ಕ್ರಿಕೆಟಿಗರು ಶಪಥ ಮಾಡಿದ್ದಾರೆ.
ಸೆವೆನ್3 ಸ್ಪೋರ್ಟ್ಸ್ ಸಂಸ್ಥೆಯು ನೇಪಾಳ ಕ್ರಿಕೆಟ್ ಸಂಸ್ಥೆಯ ಸಹಯೋಗದೊಂದಿಗೆ ನೇಪಾಳ ಕ್ರಿಕೆಟ್ ಲೀಗ್ನ್ನು ಆಯೋಜಿಸಿತ್ತು. ಆದರೆ ಈ ಲೀಗ್ ನಡೆಯುತ್ತಿದ್ದಂತೆಯೇ ಸಂಸ್ಥೆಯ ಸಂಸ್ಥಾಪಕ ಜತಿನ್ ಅಹ್ಲುವಾಲಿಯಾ ಅವರು ಭಾರತಕ್ಕೆ ಬಂದು ಇಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆಯೋಜಕರು ದೇಶ ಬಿಟ್ಟು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆಟಗಾರರಿಗೆ ಸಂಕಷ್ಟ ಎದುರಾಗಿದ್ದು, ಬರಬೇಕಾದ ಹಣ ಬಾರದೇ ಆಟವಾಡಲು ಮೈದಾನಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.
ಮೊದಲ ಹಂತದಲ್ಲಿ ಹಣ ಪಾವತಿ ಮಾಡಲಾಗಿದ್ದರೂ, ಎರಡನೇ ಹಂತದಲ್ಲಿ 4.5 ಕೋಟಿ ರೂಪಾಯಿಗಳಷ್ಟು ಪಾವತಿಗೆ ಬಾಕಿ ಇದೆ. ಇನ್ನು ಇದೇ ವೇಳೆ ಪಂದ್ಯದ ನೇರಪ್ರಸಾರ ಹಕ್ಕು ಪಡೆದುಕೊಂಡ ಸಂಸ್ಥೆಗಳಾಗಲೀ, ಕಾಮೆಂಟರ್ಗಳಾಗಲೀ ಯಾರೂ ತಮ್ಮ ಭಾಗವಹಿಸುವಿಕೆಯನ್ನು ಮುಂದುವರಿಸಲಾರೆವು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.