ನವದೆಹಲಿ, ಜ 02 ( DaijiworldNews/MS): ಜ.01 ರಂದು ಬಿಸಿಸಿಐ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಟೀಂ ಇಂಡಿಯಾ ಆಟಗಾರರಿಗೆ ದೈಹಿಕ ಸಾಮರ್ಥ್ಯ ಅಳೆಯುವ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಆಟಗಾರರ ಆಯ್ಕೆಗೆ ಮಾನದಂಡವಾಗಿ ಯೋ-ಯೋ ಟೆಸ್ಟ್ ಹಾಗೂ ಡೆಕ್ಸಾ ಟೆಸ್ಟ್ ನ್ನು ಕಡ್ಡಾಯಗೊಳಿಸಲಾಗಿದೆ.
ಡೆಕ್ಸಾ ಅಂದರೇನು?
ಡೆಕ್ಸಾ ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನ. ಆಟಗಾರರ ದೈಹಿಕ ಕ್ಷಮತೆಯನ್ನು ವೈಜ್ಞಾನಿಕವಾಗಿ, ಹೆಚ್ಚು ನಿಖರವಾಗಿ ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ . ಇಲ್ಲಿ ನಡೆಸಲಾಗುವ ಎಕ್ಸ್-ರೇ ಪರೀಕ್ಷೆ ವೇಳೆ ಆಟಗಾರರ ಮೂಳೆಯ ಸಾಮರ್ಥ್ಯದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಮೂಳೆಯ ಸಾಮರ್ಥ್ಯ ಎಷ್ಟಿದೆ, ಗಟ್ಟಿಯಾಗಿದೆಯೇ ಅಥವಾ ಬಹಳ ಬೇಗ ಮುರಿಯಬಹುದೇ ಎಂಬುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನೂ ಪತ್ತೆಹಚ್ಚಬಹುದು. ಇದು ಕೇವಲ 10 ನಿಮಿಷಗಳ ಪರೀಕ್ಷೆಯಾಗಿದೆ.
ಯೋ-ಯೋ ಟೆಸ್ಟ್ ಬಗ್ಗೆ
ಡ್ಯಾನೀಷ್ ಮೂಲದ ವೈದ್ಯಾಧಿಕಾರಿ ಜೆನ್ಸ್ ಬಂಗ್ಸ್ ಬೋ ಅವರು ಫುಟ್ಬಾಲ್ ಆಟಗಾರರ ದೈಹಿಕ ಸಾಮರ್ಥ್ಯ ಅಳೆಯುವುದಕ್ಕಾಗಿ ವಿನ್ಯಾಸಗೊಳಿಸಿದ ಪರೀಕ್ಷೆಯಾಗಿದೆ. ಯೋ-ಯೋ ಟೆಸ್ಟ್ 23 ಹಂತಗಳ ಪರೀಕ್ಷೆಯಾಗಿದೆ. ಏರೋಬಿಕ್ ಫಿಟ್ ನೆಸ್ ಪರೀಕ್ಶೆ ಮಾದರಿ ಇದಾಗಿದ್ದು , ವೇಗದ ಓಟಕ್ಕೆ ಒತ್ತು ನೀಡಲಾಗುತ್ತದೆ. ಕ್ರಿಕೆಟಿಗರಿಗೆ 20 ಮೀ. ದೂರವನ್ನು ನಿಗದಿತ ಅವಧಿಯಲ್ಲಿ ಪೂರೈಸುವುದಾಗಿರುತ್ತದೆ. ಇಲ್ಲಿ ತೇರ್ಗಡೆಯಾಗಲು ಕನಿಷ್ಠ 16.1 ಅಂಕ ಅಗತ್ಯ.