ನವದೆಹಲಿ, ಡಿ 22 (DaijiworldNews/DB): ಅತಿ ಹೆಚ್ಚು ರನ್ ಬಾರಿಸಿರುವುದು ಸೇರಿ ಕ್ರಿಕೆಟ್ನಲ್ಲಿ ಆಟಗಾರರು ವಿವಿಧ ದಾಖಲೆಗಳನ್ನು ಮಾಡಿರುವುದನ್ನು ನೋಡಿದ್ದೇವೆ. ಆದರೆ ಭಾರತದ ವೇಗಿ ಜಯದೇವ್ ಉನಾದ್ಕತ್ ಅವರು ಅತಿ ಹೆಚ್ಚು ಪಂದ್ಯಗಳನ್ನು ಮಿಸ್ ಮಾಡಿಕೊಂಡ ದಾಖಲೆ ಮಾಡಿದ್ದಾರೆ!
ಹೌದು. ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಕಳೆದುಕೊಂಡ ಮೊದಲ ಕ್ರಿಕೆಟಿಗ 31 ರ ಹರೆಯದ ಜಯದೇವ್ ಆಗಿದ್ದಾರೆ. 2010ರಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಜಯದೇವ್ ಸೇರ್ಪಡೆಯಾಗಿದ್ದರು. ತಮ್ಮ ವೃತ್ತಿ ಜೀವನ ಆರಂಭಿಸಿ ಬರೋಬ್ಬರಿ 12 ವರ್ಷದ ಬಳಿಕ ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯದೇವ್ ಕಾಣಿಸಿಕೊಂಡಿದ್ದಾರೆ. ಢಾಕಾದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಭಾರತ ತಂಡದಲ್ಲಿ ಜಯದೇವ್ ಆಡುತ್ತಿದ್ದಾರೆ. ದಶಕಗಳ ಬಳಿಕ ಬಂದ ಹಿನ್ನೆಲೆಯಲ್ಲಿ ಅವರು ಅತಿ ಹೆಚ್ಚು ಪಂದ್ಯಗಳನ್ನು ಮಿಸ್ ಮಾಡಿಕೊಂಡ ದೇಶದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
ಇನ್ನು ಚಟ್ಟೋಗ್ರಾಮ್ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾದವರಲ್ಲಿ ಕುಲದೀಪ್ ಯಾದವ್ ಅವರೂ ಒಬ್ಬರಾಗಿದ್ದರು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ಇದೀಗ ಅವರ ಬದಲಿಗೆ ಜಯದೇವ್ಗೆ ಸ್ಥಾನ ನೀಡಿರುವುದೂ ಕ್ರಿಕೆಟ್ ಪ್ರೇಮಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ.