ಕರಾಚಿ, ಡಿ 21 (DaijiworldNews/DB): ಪಾಕ್ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಶಾಹೀನ್ ಶಾ ಆಫ್ರಿದಿ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷವೆಂದರೆ ಮಾಜಿ ಆಟಗಾರನ ಪುತ್ರಿಯನ್ನೇ ಶಾಹೀನ್ ವರಿಸಲಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಷಾ ಜೊತೆ ಶಾಹೀನ್ ನಿಖಾಹ್ ಮಾಡಿಕೊಳ್ಳಲಿದ್ದಾರೆ. ಇನ್ನು ಇವರ ಮದುವೆ ದಿನಾಂಕ ಫೆಬ್ರವರಿ 3ಕ್ಕೆ ನಿಗದಿಯಾಗಿದೆ. ಎರಡು ವರ್ಷಗಳ ಹಿಂದೆಯೇ ಇವರಿಬ್ಬರ ಎಂಗೇಜ್ಮೆಂಟ್ ನೆರವೇರಿದ್ದು, ಇದೀಗ ಮದುವೆಗೆ ಸಿದ್ದತೆ ನಡೆಸುತ್ತಿದ್ದು, ಕರಾಚಿಯಲ್ಲಿ ಮದುವೆ ಸಮಾರಂಭ ನಡೆಯಲಿದೆ. ಆರತಕ್ಷತೆ ಯಾವಾಗ ನಡೆಯಲಿದೆ ಎಂದು ತಿಳಿದು ಬಂದಿಲ್ಲ. ಅನ್ಷಾ ಶಾಹಿದ್ ಅಫ್ರಿದಿ ಅವರ ಹಿರಿಯ ಪುತ್ರಿ.
ಪಾಕ್ ತಂಡದ ಸ್ಟಾರ್ ಬೌಲರ್ ಆಗಿರುವ ಶಾಹೀನ್ ಶಾ ಆಫ್ರಿದಿ 25 ಟೆಸ್ಟ್, 32 ಒಡಿಐ, 47 ಟಿ 20 ಪಂದ್ಯಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಡಿಸೆಂಬರ್ 26ಕ್ಕೆ ತಮ್ಮ ಸಹಪಾಠಿಯೊಂದಿಗೆ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.