ಪ್ಯಾರಿಸ್, ಡಿ 20 (DaijiworldNews/DB): ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಫ್ರಾನ್ಸ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕರೀಂ ಬೆಂಜೆಮಾ ಅವರು ನಿವೃತ್ತಿ ಘೋಷಿಸಿದ್ದಾರೆ. ಕತಾರ್ ಫಿಫಾ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಫ್ರಾನ್ಸ್ ತಂಡದ ಪ್ರಮುಖ ಆಟಗಾರ ಎಂದೇ ಬಿಂಬಿಸಲಾದ ಬೆಂಜೆಮಾ, ಕೂಟ ಆರಂಭವಾಗುವುದಕ್ಕೆ ಮುನ್ನ ಅಭ್ಯಾಸ ನಡೆಸುತ್ತಿದ್ದಾಗ ಗಾಯಗೊಂಡು ಕೂಟದಿಂದ ಹೊರ ಬಿದ್ದಿದ್ದರು. ಇನ್ನು ಅವರ ಅನುಪಸ್ಥಿತಿಯಲ್ಲಿ ಅರ್ಜೆಂಟೀನಾ ವಿರುದ್ದ ಆಡಿದ ಫ್ರಾನ್ಸ್ ತಂಡ ಸೋಲೊಪ್ಪಿಕೊಂಡು ಫೈನಲ್ನಿಂದ ಹೊರ ಬಿದ್ದಿತು. ಈ ಹಿನ್ನೆಲೆಯಲ್ಲಿ ಬೆಂಜೆಮಾ ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ್ದಾರೆ. ಆದರೆ ಕ್ಲಬ್ ಪರ ಆಡುವುದನ್ನು ಅವರು ಮುಂದುವರಿಸಲಿದ್ದಾರೆ.
ಇನ್ನು ವಿಶ್ವಕಪ್ ನಡೆಯಲು ಕೆಲವು ವರ್ಷಗಳಿವೆ. ಆ ಸಂದರ್ಭದಲ್ಲಿ ಆಟವಾಡಲು ನನ್ನ ದೇಹ ಸ್ಪಂದಿಸಬಹುದೇ ಎಂಬುದು ಗೊತ್ತಿಲ್ಲ. ಮುಂದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಬದಲು ಯುವ ಆಟಗಾರರಿಗೆ ಅವಕಾಶ ನೀಡಿದರೆ ಉತ್ತಮ ಎಂದು ಯೋಚಿಸಿ ನಿವೃತ್ತಿ ತೀರ್ಮಾನ ತೆಗೆದುಕೊಂಡಿದ್ದೇನೆ. ಈ ನಿರ್ಧಾರ ಕಠಿಣವೇ ಆದರೆ, ಯುವ ಆಟಗಾರರ ಭವಿಷ್ಯ ಮತ್ತು ತಂಡದ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಭಾವಿಸಿರುವೆ ಎಂದವರು ಹೇಳಿಕೊಂಡಿದ್ದಾರೆ.
2007ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಪ್ರವೇಶ ಮಾಡಿದ ಬೆಂಜೆಮಾ, 2008 ಮತ್ತು 2012ರ ಯುರೋ ಕಪ್ ಹಾಗೂ 2014ರ ವಿಶ್ವ ಕಪ್ ಟೂರ್ನಿಯಲ್ಲಿ ಪ್ರದರ್ಶನ ನೀಡಿದ್ದರು. 2014ರ ವಿಶ್ವ ಕಪ್ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ್ದರು. ವಿವಾದವೊಂದನ್ನು ಮೈಮೇಲೆ ಎಳೆದುಕೊಂಡು 2018ರ ವಿಶ್ವ ಕಪ್ ಟೂರ್ನಿಯಿಂದ ವಂಚಿತರಾಗಿದ್ದರು.