ಕತಾರ್, ಡಿ 19 (DaijiworldNews/DB): ಫಿಫಾ ವಿಶ್ವಕಪ್ ಫೈನಲ್ನಲ್ಲಿ ಫ್ರಾನ್ಸ್ ತಂಡವನ್ನು ಅರ್ಜೆಂಟೀನಾ ತಂಡ ಸೋಲಿಸುವುದರೊಂದಿಗೆ ಆ ತಂಡವನ್ನು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿಸಿದ ಲಿಯೋನೆಲ್ ಮೆಸ್ಸಿ ಫುಟ್ಬಾಲ್ನಿಂದ ನಿವೃತ್ತರಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ತಮ್ಮ ನಿವೃತ್ತಿ ಕುರಿತ ಊಹಾಪೋಹಗಳಿಗೆ ಇದೀಗ ಅಧಿಕೃತವಾಗಿ ತೆರೆ ಎಳೆದಿರುವ ಮೆಸ್ಸಿ, ತಾನು ನಿವೃತ್ತಿಯಾಗುತ್ತಿಲ್ಲ ಮತ್ತು ಅರ್ಜೆಂಟೀನಾ ತಂಡದಲ್ಲಿ ಆಡುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಗಿ ಅರ್ಜೆಂಟೀನಾ ತಂಡ ಹೊರ ಹೊಮ್ಮಿದ ಬಳಿಕ ಲಿಯೋನೆಲ್ ಮೆಸ್ಸಿ ವಿಶ್ವವಿಖ್ಯಾತರಾದರು. ಆದರೆ ಈ ವೇಳೆ ಅವರು ನಿವೃತ್ತಿಯಾಗಲಿದ್ದಾರೆಂದೇ ಊಹಾಪೋಹಗಳು ಹಬ್ಬಿದ್ದವು. ಇದಕ್ಕೆ ಪೂರಕವೆಂಬಂತೆ ಕೊನೆ ಪಂದ್ಯಕ್ಕೂ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೆಸ್ಸಿ, ಇದು ತನ್ನ ಅಂತಿಮ ಅಂತಾರಾಷ್ಟ್ರೀಯ ಪಂದ್ಯ ಎಂದು ಹೇಳಿದ್ದೇ ಇದಕ್ಕೆ ಕಾರಣವಾಗಿತ್ತು. ಆದರೆ ಅಂತಿಮ ಪಂದ್ಯ ಮುಗಿದ ಬಳಿಕ ತನ್ನ ನಿವೃತ್ತಿ ಸುದ್ದಿಗಳಿಗೆ ತೆರೆ ಎಳೆದಿದ್ದು, ಅಂರ್ಜೆಂಟಿನಾ ಪರ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಆ ಮೂಲಕ ಹಿಂದೆ ಮಾಡಿದ್ದ ನಿರ್ಧಾರವನ್ನು ಬದಲಿಸಿದಂತೆ ತೋರುತ್ತಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
ಐದು ವಿಶ್ವಕಪ್ಗಳನ್ನು ಆಡಿದ ಆರನೇ ಆಟಗಾರ ಎಂಬ ಖ್ಯಾತಿ ಮೆಸ್ಸಿಗಿದೆ. ಇನ್ನು ಫೈನಲ್ನಲ್ಲಿ ಎರಡು ಗೋಲು ಗಳಿಸಿದ ಅವರು ವಿಶ್ವಕಪ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 26 ವಿಶ್ವಕಪ್ ಪಂದ್ಯಗಳಲ್ಲಿ ಒಟ್ಟು 13 ಗೋಲುಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.