ಮುಂಬೈ, ಡಿ 17 (DaijiworldNews/DB): ಟೀಂ ಇಂಡಿಯಾದಲ್ಲಿ ಮೇಲಿಂದ ಮೇಲೆ ಮದುವೆ ಸಂಭ್ರಮ ಶುರುವಾಗಿದೆ. ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ಮದುವೆ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಭಾರತ ತಂಡದ ಇನ್ನೊಬ್ಬ ಕ್ರಿಕೆಟಿಗನೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಕ್ರಿಕೆಟಿಗ ಶಾರ್ದೂಲ್ ಠಾಕೂರ್ ಶೀಘ್ರವೇ ಮಿಥಾಲಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮಾಧ್ಯಮವೊಂದರ ವರದಿ ಪ್ರಕಾರ ಶಾರ್ದೂಲ್ ಮತ್ತು ಮಿಥಾಲಿ ಫೆಬ್ರವರಿ 27ರಂದು ಮದುವೆಯಾಗಲಿದ್ದಾರೆ. ಮುಂಬೈನಲ್ಲಿ ವಿವಾಹ ಸಮಾರಂಭ ನಡೆಯಲಿದ್ದು,ಸುಮಾರು 200 ರಿಂದ 250 ಅತಿಥಿಗಳು ಸಾಕ್ಷಿಯಾಗಲಿದ್ದಾರೆ ಎಂದು ಶಾರ್ದೂಲ್ ಭಾವಿ ಪತ್ನಿ ಮಿಥಾಲಿ ಹೇಳಿದ್ದಾರೆ.
ಫೆಬ್ರವರಿ 25ರಿಂದಲೇ ಮದುವೆಯ ಸಂಭ್ರಮ ಕಾರ್ಯಕ್ರಮಗಳು ಆರಂಭವಾಗಲಿವೆ ಎನ್ನಲಾಗಿದೆ. ಮಿಥಾಲಿ ಅವರು ಬ್ಯಾಂಕಿಂಗ್ ಸ್ಟಾರ್ಟ್ಅಪ್ನ ಸಂಸ್ಥಾಪಕಿಯಾಗಿದ್ದಾರೆ. ವಿಶೇಷವೆಂದರೆ ಮದುವೆಯ ಕೇಕ್ನ್ನು ಸ್ವತಃ ಮಿಥಾಲಿ ಅವರೇ ತಯಾರಿಸಲಿದ್ದಾರೆ.
ಇನ್ನು ಕಳೆದ ವರ್ಷವಷ್ಟೇ ಇವರಿಬ್ಬರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು. ಸದ್ಯ ಶಾರ್ದೂಲ್ ಅವರು ತುಂಬಾ ಬ್ಯುಸಿಯಾಗಿದ್ದು, ಹಲವು ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಫೆಬ್ರವರಿ 24ಕ್ಕೂ ಪಂದ್ಯವೊಂದು ನಿಗದಿಯಾಗಿದೆ ಎಂದು ತಿಳಿದು ಬಂದಿದೆ.