ಮುಂಬೈ, ಡಿ 16 (DaijiworldNews/DB): ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ನ ಪ್ರೀತಿಯಲ್ಲಿ ಬೀಳಲಿ. ಅವನಿಗೆ ಆ ಅವಕಾಶ ನೀಡಿ..ಇದು ತನ್ನ ಮಗನ ಕ್ರಿಕೆಟ್ ವೃತ್ತಿ ಜೀವನ ಆರಂಭದ ಸಂದರ್ಭದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೇಳಿದ ಸ್ಪಷ್ಟ ಮಾತು.
23 ವರ್ಷ ವಯಸ್ಸಿನ ಅರ್ಜುನ್ ತೆಂಡೂಲ್ಕರ್ ಗೋವಾ ಪರ ಚೊಚ್ಚಲ ಶತಕ ಬಾರಿಸಿದ ಬಳಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮಗನ ಬಾಲ್ಯ ಮತ್ತು ವೃತ್ತಿ ಜೀವನದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಜನಪ್ರಿಯ ಕ್ರಿಕೆಟಿಗನ ಮಗನಾದ್ದರಿಂದ ಅರ್ಜುನ್ ಸಾಮಾನ್ಯ ಬಾಲ್ಯವನ್ನು ಕಳೆದಿಲ್ಲ. ಅದು ಅಷ್ಟು ಸುಲಭವೂ ಆಗಿರಲಿಲ್ಲ ಎಂದರು.
ಅರ್ಜುನ್ಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿಯಿದೆ. ಅವನು ಚೊಚ್ಚಲ ಶತಕ ಬಾರಿಸಿದಾಗ ನನಗೆ ನನ್ನ ತಂದೆ ನೆನಪಾದರು. ನನ್ನ ಸಾಧನೆ ಬಗ್ಗೆ ಬೇರೆಯವರು ನನ್ನ ತಂದೆ ಬಳಿ ಕೇಳುತ್ತಿದ್ದಾಗ ಅವರಿಗೆ ಹೆಮ್ಮೆಯಾಗುತ್ತಿತ್ತು. ನನಗೂ ಆ ಹೆಮ್ಮೆಯ ನೆನಪಾಗುತ್ತಿದೆ ಎಂದು ಸಚಿನ್ ಹೇಳಿದರು.
ಅರ್ಜುನ್ನನ್ನು ಅವನಷ್ಟಕ್ಕೆ ಬಿಟ್ಟು ಬಿಡಿ. ಅವನು ಕ್ರಿಕೆಟ್ನ ಪ್ರೀತಿಯಲ್ಲಿ ಬೀಳಲಿ, ಆ ಮೂಲಕ ಸಾಧಿಸಲಿ. ಆ ಅವಕಾಶವನ್ನು ಅವನಿಗೆ ಕಲ್ಪಿಸಿ ಎಂದು ಇದೇ ವೇಳೆ ತೆಂಡೂಲ್ಕರ್ ಮನವಿ ಮಾಡಿದರು. ನಾನು ಹೊರಗೆ ಹೋಗಲು ಮತ್ತು ನನ್ನನ್ನು ಹೊಸ ಅವಕಾಶಗಳಿಗೆ ತೆರೆದುಕೊಳ್ಳಲು ನನ್ನ ಹೆತ್ತವರು ಸ್ವಾತಂತ್ರ್ಯ ನೀಡಿದರು. ನಿರೀಕ್ಷೆಗಳ ಒತ್ತಡವಿಲ್ಲದೆ, ಪ್ರೋತ್ಸಾಹ ಮತ್ತು ಬೆಂಬಲದಿಂದಾಗಿ ನಮ್ಮನ್ನು ನಾವು ಹೊರ ಜಗತ್ತಿಗೆ ಯಾವ ರೀತಿ ತೋರಿಸಿಕೊಳ್ಳಬಹುದು ಎಂಬುದನ್ನು ನನ್ನ ಹೆತ್ತವರು ನನಗೆ ಹೇಳಿಕೊಟ್ಟರು. ಅರ್ಜುನ್ ವಿಚಾರದಲ್ಲಿಯೂ ನಾನು ಇದೇ ರೀತಿ ಮುಂದುವರಿಯುತ್ತೇನೆ ಮತ್ತು ಅವನಿಗೆ ಅದನ್ನು ಯಾವಾಗಲೂ ಹೇಳುತ್ತೇನೆ ಎಂದು ಸಚಿನ್ ಸ್ಮರಿಸಿದರು.