ನವದೆಹಲಿ, ಡಿ 15 (DaijiworldNews/DB): ವೃತ್ತಿ ಜೀವನದಲ್ಲಿ ಬರೋಬ್ಬರಿ ಮೂರು ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪ್ರತಿ ಸಮಯವನ್ನು ಕ್ರಿಕೆಟ್ ಗಾಗಿ ಮೀಸಲಿಟ್ಟಿದ್ದಾರೆ. ಇದೀಗ ವಿಶ್ರಾಂತಿಗೆ ಸಮಯವಿದ್ದರೂ ವಿರಮಿಸದೆ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದಾರೆ.
2019 ನವೆಂಬರ್ ನಿಂದ 2022 ಸೆಪ್ಟೆಂಬರ್ ವರೆಗೆ ಕೊಹ್ಲಿ ಶೂನ್ಯ ಶತಕ ಸಂಪಾದಿಸಿದ್ದರು. ಇದರಿಂದ ಸಾಮಾಜಿಕವಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈ ನಡುವೆ ತಮ್ಮ ಕ್ರಿಕೆಟ್ ಜೀವನದಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡಿದ್ದ ಕಿಂಗ್ ಕೊಹ್ಲಿ ಬಳಿಕ ಕಮ್ ಬ್ಯಾಕ್ ಮಾಡಿದ್ದರು. 2022ರ ಏಷ್ಯಾಕಪ್ ನಲ್ಲಿ ಅಪ್ಘಾನ್ ತಂಡದ ವಿರುದ್ದ ಶತಕ ಬಾರಿಸುವುದರೊಂದಿಗೆ ಮೂರು ವರ್ಷದ ಬಳಿಕ ತಮ್ಮ ತಾಕತ್ತನ್ನು ಸಾಬೀತುಪಡಿಸಿದರು. ಬಳಿಕ ಡಿಸೆಂಬರ್10ರಂದು ಬಾಂಗ್ಲಾ ವಿರುದ್ದದ ಏಕದಿನ ಪಂದ್ಯದಲ್ಲಿಯೂ ಶತಕ ಸಿಡಿಸಿ ಮಿಂಚಿದರು.
ಇದೀಗ ಮುಂದಿನ ವಿಶ್ವಕಪ್ ಗೆ ಈಗಿಂದಲೇ ತಯಾರಿ ಆರಂಭಿಸಿರುವ ಕೊಹ್ಲಿ ಎದುರಾಳಿ ತಂಡಕ್ಕೆ ಭರ್ಜರಿ ಎದಿರೇಟು ನೀಡಲು ಸಿದ್ದರಾಗುತ್ತಿದ್ದಾರೆ. ವಿಶ್ರಾಂತಿಯನ್ನೂ ಬಯಸದೆ ಬ್ಯಾಟಿಂಗ್ ಅಭ್ಯಾಸದಲ್ಲಿ ಕೊಹ್ಲಿ ತೊಡಗಿಸಿಕೊಂಡಿದ್ದಾರೆ. ಕೊಹ್ಲಿಯ ಈ ಡೆಡಿಕೇಶನ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.