ಚಿತ್ತಗಾಂಗ್,ಡಿ 14 (DaijiworldNews/SM): ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ಆರಂಭಗೊಂಡಿದ್ದು, ಮೊದಲ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದೆ.
ಚಿತ್ತಗಾಂಗ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಆರಂಭಿಸಿದ ಟೀಂ ಇಂಡಿಯಾ 90 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಲು ಶಕ್ತವಾಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿತು. 48 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಗಳನ್ನು ಭಾರತ ಕಳೆದುಕೊಂಡಿತು. ಆರಂಭಿಕರಾದ ಕೆಎಲ್ ರಾಹುಲ್ 22, ಶುಭ್ಮನ್ ಗಿಲ್ 20 ಹಾಗೂ ವಿರಾಟ್ ಕೊಹ್ಲಿ ಕೇವಲ 1 ರನ್ ಗೆ ಔಟಾಗಿ, ಫೆವೀಲಿಯನ್ ನತ್ತ ಹೆಜ್ಜೆ ಹಾಕಿದರು.
ಈ ಚೇತೇಶ್ವರ ಪೂಜಾರ ಹಾಗೂ ರಿಷಬ್ ಪಂತ್ 60 ರನ್ ಗಳ ಜೊತೆಯಾಟ ನೀಡಿದರು. ಇನ್ನು ಪಂತ್ 46 ರನ್ ಗಳಿಸಿದ್ದಾಗ ಮೆಹದಿ ಹಸನ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ಅರ್ಧ ಶತಕ ವಂಚಿತರಾದರು. ಇನ್ನು ಚೇತೇಶ್ವರ ಪೂಜಾರ 90 ರನ್ ಗಳಿಸಿದ್ದಾಗ ತೈಜುಲ್ ಇಸ್ಲಾಮ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು.
ಇನ್ನು ಶ್ರೇಯಸ್ ಅಯ್ಯರ್ ಅಜೇಯ 82 ರನ್ ಪೇರಿಸಿದ್ದು ಎರಡನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ. ಬಾಂಗ್ಲಾದೇಶ ಪರ ತೈಜುಲ್ ಇಸ್ಲಾಂ 3, ಮೆಹದಿ ಹಸನ್ 2 ಮತ್ತು ಖಾಲೀದ್ ಅಹ್ಮದ್ 1 ವಿಕೆಟ್ ಪಡೆದಿದ್ದಾರೆ.