ನವದೆಹಲಿ, ಡಿ12 ( DaijiworldNews/MS): ಫಿಫಾ ವಿಶ್ವಕಪ್ನಿಂದ ಪೋರ್ಚುಗಲ್ ತಂಡ ನಿರ್ಗಮಿಸಿದ್ದು,ಕ್ರಿಸ್ಟಿಯಾನೊ ರೊನಾಲ್ಡೋ ಅವರ ಕಪ್ ಗೆಲುವಿನ ಕನಸು ಕೂಡಾ ಛಿದ್ರಗೊಂಡಿದೆ. " ಅಲ್ ತುಮಾಮ ಸ್ಟೇಡಿಯಂ ನಲ್ಲಿ ರೊನಾಲ್ಡೋ ಕಣ್ಣೀರಿಡುತ್ತಾ ಮೈದಾನ ತೊರೆದಿರುವುದು ಫುಟ್ ಬಾಲ್ ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿತ್ತು. ವಿಶ್ವ ಫುಟ್ ಬಾಲ್ ನಲ್ಲಿ ರೊನಾಲ್ಡೋ ಅದೆಷ್ಟೋ ಸಾಧನೆ ಮಾಡಿದರೂ , ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯನೆನಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ.
ಮುಂದಿನ ವಿಶ್ವಕಪ್ ವೇಳೆ ರೊನಾಲ್ಡೋ ಗೆ 41 ವರ್ಷ ತುಂಬುವ ಕಾರಣ ಆಡುವ ಸಾಧ್ಯತೆ ತುಂಬಾ ಕಡಿಮೆ ಹೀಗಾಗಿ 37 ವರ್ಷದ ರೊನಾಲ್ಡೊ ವಿಶ್ವಕಪ್ ಟ್ರೋಫಿ ಇಲ್ಲದೆ ತನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ಇದೇ ಅವರಿಗೆ ಅಂತಿಮ ಅವಕಾಶವಾಗಿತ್ತು.
ರೊನಾಲ್ಡೊಗೆ ವಿರಾಟ್ ಬೆಂಬಲ:
ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬೆಂಬಲಿಸಿದ್ದಾರೆ.
"ಈ ಕ್ರೀಡೆಯಲ್ಲಿ ಮತ್ತು ಪ್ರಪಂಚದಾದ್ಯಂತದ ಕ್ರೀಡಾ ಅಭಿಮಾನಿಗಳಿಗಾಗಿ ನೀವು ಏನು ಮಾಡಿದ್ದೀರಿ ಎನ್ನುವುದರ ಮುಂದೆ ಯಾವುದೇ ಟ್ರೋಫಿ ಅಥವಾ ಯಾವುದೇ ಪ್ರಶಸ್ತಿ ವಿವರಿಸಲು ಸಾಧ್ಯವಿಲ್ಲ. ನೀವು ಜನರ ಮೇಲೆ ಬೀರಿರುವ ಪ್ರಭಾವವನ್ನು ಯಾವುದೇ ಪ್ರಶಸ್ತ್ರಿಯು ವಿವರಿಸಲು ಸಾಧ್ಯವಿಲ್ಲ ಮತ್ತು ನೀವು ಆಟವನ್ನು ನಾವು ಮತ್ತು ಪ್ರಪಂಚದಾದ್ಯಂತದ ಅನೇಕರು ನೋಡಿದಾಗ ನಮಗೆ ಏನನಿಸುತ್ತದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ.ಅದೇ ದೇವರ ಕೊಡುಗೆ. ನೀವು ನನಗೆ ಸಾರ್ವಕಾಲಿಕ ಶ್ರೇಷ್ಠರು.! " ಎಂದು ಸೋಮವಾರ ಬೆಳಿಗ್ಗೆ ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.