ಮುಂಬಯಿ, ಡಿ 09 (DaijiworldNews/DB): ಕ್ರೀಡಾಭಿಮಾನಿಗಳು ತಮ್ಮಿಷ್ಟದ ಆಟಗಳನ್ನು ವೀಕ್ಷಿಸಲು ನಾನಾ ಮಾರ್ಗಗಳನ್ನು ಹುಡುಕುತ್ತಾರೆ. ಇಲ್ಲೊಬ್ಬ ಫುಟ್ಬಾಲ್ ಪ್ರೇಮಿ ಶಸ್ತ್ರಚಿಕಿತ್ಸೆ ಕೊಠಡಿಯೊಳಗೆ ಟಿವಿ ಹಾಕಿಸಿಕೊಂಡು ಶಸ್ತ್ರಚಿಕಿತ್ಸೆ ನಡುವೆಯೇ ಫಿಫಾ ವಿಶ್ವಕಪ್ ವೀಕ್ಷಿಸಿ ಸುದ್ದಿಯಾಗಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರ ಅವರು ಈ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಈ ವ್ಯಕ್ತಿಯೂ ಕೂಡಾ ಕೆಲವು ಟ್ರೋಫಿಗಳಿಗೆ ಅರ್ಹನಾಗಿದ್ದಾನೆ ಎಂದು ಹೇಳಿದ್ದಾರೆ.
ಅಷ್ಟಕ್ಕೂ ಈ ಪ್ರಸಂಗ ನಡೆದಿರುವುದು ಪೋಲೆಂಡ್ನ ಕೀಲ್ಸ್ನಲ್ಲಿರುವ ಆಸ್ಪತ್ರೆಯೊಂದರಲ್ಲಿ ನವೆಂಬರ್ 25ರಂದು ಈ ವ್ಯಕ್ತಿ ದೇಹದ ಯಾವುದೋ ಕಾಯಿಲೆಯೊಂದಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಈ ವ್ಯಕ್ತಿ ಫುಟ್ಬಾಲ್ ಅಭಿಮಾನಿಯಾಗಿದ್ದು, ಶಸ್ತ್ರಚಿಕಿತ್ಸೆಯ ದಿನದಂದು ವೇಲ್ಸ್ ಮತ್ತು ಇರಾನ್ ನಡುವಿನ ಪಂದ್ಯ ವೀಕ್ಷಣೆಯ ಕುತೂಹಲವಿತ್ತು. ಅದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗ ವೇಲ್ಸ್ ಮತ್ತು ಇರಾನ್ ನಡುವಿನ ಪಂದ್ಯ ವೀಕ್ಷಿಸಲು ಆಪರೇಷನ್ ರೂಂನಲ್ಲಿ ಟಿವಿ ಹಾಕಿಸಲು ಮನವಿ ಮಾಡಿದ್ದಾರೆ.
ರೋಗಿಯ ಮನವಿಗೆ ಸ್ಪಂದಿಸಿದ ಆಸ್ಪತ್ರೆ ಅಧಿಕಾರಿಗಳು ಆಪರೇಷನ್ ರೂಂನಲ್ಲಿಯೇ ಟಿವಿ ಹಾಕಿಸಿಕೊಟ್ಟಿದ್ದಾರೆ. ಇದರಿಂದ ಇತ್ತ ಆಪರೇಷನ್ ನಡೆಯುತ್ತಿರುವಾಗ ಅತ್ತ ರೋಗಿ ಟಿವಿಯಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ. ಈ ಅಪರೂಪದ ಪ್ರಸಂಗ ಮತ್ತು ಆತನ ಫುಟ್ಬಾಲ್ ಅಭಿಮಾನಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.