ನವದೆಹಲಿ, ಡಿ 03(DaijiworldNews//DB): ಭಾರತದ ಪ್ರಸಿದ್ದ ಕ್ರೀಡಾಪಟು ದ್ಯುತಿ ಚಂದ್ ಅವರು ತಮ್ಮ ಸಲಿಂಗಿ ಗೆಳತಿಯೊಂದಿಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಫೋಟೋ ಇದೀಗ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಫೋಟೋದಲ್ಲಿ ಮದುವೆ ಧಿರಿಸಿನಲ್ಲೇ ಇಬ್ಬರೂ ಕಾಣುತ್ತಿರುವುದರಿಂದ ಇಬ್ಬರೂ ಮದುವೆಯಾಗಿದ್ದಾರೆಂಬ ವದಂತಿಯೂ ಹಬ್ಬಿತ್ತು.
ದ್ಯುತಿ ಚಂದ್ ತಾನು ಸಲಿಂಗಿ ಎಂಬುದನ್ನು 2019ರಲ್ಲಿ ಘೋಷಿಸಿಕೊಳ್ಳುವ ಮೂಲಕ ಭಾರತದ ಕ್ರೀಡಾಕ್ಷೇತ್ರದಲ್ಲೇ ಈ ರೀತಿ ಹೇಳಿದವರಲ್ಲಿ ಮೊದಲಿಗರಾದರು. ಅವರ ಈ ಹೇಳಿಕೆ ಆ ಸಂದರ್ಭದಲ್ಲಿ ತೀವ್ರ ಸಂಚಲನಕ್ಕೂ ಕಾರಣವಾಗಿತ್ತಲ್ಲದೆ, ಭಿನ್ನ ಅಭಿಪ್ರಾಯಗಳೂ ವ್ಯಕ್ತವಾಗಿತ್ತು. ಇನ್ನು ದ್ಯುತಿ ಮನೆಯವರೇ ಆಗ ಇದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.
ಇದೀಗ ಡಿಸೆಂಬರ್ 2ರಂದು ತಮ್ಮ ಗೆಳತಿ ಮೊನಾಲಿಸಾಳೊಂದಿಗಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದು, ಅವರ ಸಲಿಂಗಿ ಪ್ರೇಮ ಮತ್ತೆ ಮುನ್ನೆಲೆಗೆ ಬಂದಿದೆ. ಫೋಟೋಕ್ಕೆ ’ಲವ್ ಈಸ್ ಲವ್’ ಎಂಬುದಾಗಿ ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ, ನಿನ್ನನ್ನು ನಿನ್ನೆ ಪ್ರೀತಿಸಿದೆ, ಈಗಲೂ ಪ್ರೀತಿಸಿದೆ,ಯಾವಾಗಲೂ ಪ್ರೀತಿಸುತ್ತಲೇ ಇರುತ್ತೇನೆ ಎಂದೂ ಬರೆದುಕೊಂಡಿದ್ದಾರೆ.
ಇನ್ನು ಈ ಫೋಟೋ ನೋಡಿದ ನೆಟ್ಟಿಗರು ದ್ಯುತಿ ಮತ್ತು ಮೊನಾಲಿಸಾ ಮದುವೆಯಾಗಿದ್ದಾರೆಂದೇ ಭಾವಿಸಿದ್ದಾರೆ. ಫೋಟೋದಲ್ಲಿ ಮೊನಾಲಿಸಾ ಮದುವೆ ಹೆಣ್ಣಿನಂತೆ ಲೆಹೆಂಗಾ ತೊಟ್ಟು ಶೃಂಗಾರಗೊಂಡಿದ್ದರೆ, ದ್ಯುತಿ ಸೂಟ್ ಬೂಟ್ ತೊಟ್ಟು ಅವರೊಂದಿಗೆ ಕುಳಿತುಕೊಂಡಿದ್ದಾರೆ. ಇದೇ ಅವರ ಮದುವೆ ಬಗ್ಗೆ ವದಂತಿ ಹಬ್ಬಲು ಕಾರಣವಾಗಿತ್ತು. ಆದರೆ ಈ ಫೋಟೋ ದ್ಯುತಿ ಅವರ ತಂಗಿಯ ಮದುವೆಯಲ್ಲಿ ತೆಗೆದದ್ದಾಗಿದೆ ಎಂದು ತಿಳಿದು ಬಂದಿದೆ.