ನವದೆಹಲಿ, ನ 28 (DaijiworldNews/MS): ಭಾರತದ ಮಾಜಿ ಅಥ್ಲೀಟ್ ಮತ್ತು ಸಂಸದೆ, ಪಿಟಿ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ನ ಮೊದಲ ಮಹಿಳಾ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ 58ರ ಹರೆಯದ ಉಷಾ ಅವರು ಡಿಸೆಂಬರ್ 10ರಂದು ಅಧಿಕೃತ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಐಒಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಐಒಎ ವಿವಿಧ ಹುದ್ದೆಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಗಡುವು ನವೆಂಬರ್ 27ರ ಭಾನುವಾರ ಕೊನೆಗೊಂಡಿದೆ. ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದವರು ಭಾರತದ ಓಟದ ದಂತಕತೆ ಪಿ.ಟಿ ಉಷಾ ಮಾತ್ರ ಹೀಗಾಗಿ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ. ಆದರೆ ಉಳಿದ ಹುದ್ದೆಗಳಿಗೆ ಒಟ್ಟು ೨೪ ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಉಮೇಶ್ ಸಿನ್ಹಾ ತಿಳಿಸಿದ್ದಾರೆ.