ದುಬೈ, ನ 27 (DaijiworldNews/DB): ಕೇರಳದ ಐದು ಮಕ್ಕಳ ತಾಯಿಯೊಬ್ಬರು ತಮ್ಮ ಎಸ್ಯುವಿ ಕಾರಿನಲ್ಲಿ ಕತಾರ್ಗೆ ಪ್ರಯಾಣಿಸುತ್ತಿದ್ದಾರೆ. ಅವರ ಈ ಪ್ರಯಾಣದ ಉದ್ದೇಶ ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟೀನಾ ಆಟಗಾರ ಲಯೊನೆಲ್ ಮೆಸ್ಸಿ ಅವರ ಆಟ ನೋಡುವುದು!
ಕೇರಳದ ನಾಝಿ ನೌಶಿ ಅವರೇ ಕತಾರ್ಗೆ ಪ್ರಯಾಣಿಸುತ್ತಿರುವ ಮಹಿಳೆ. ಅಕ್ಟೋಬರ್ 15ಕ್ಕೇ ಕೇರಳದಿಂದ ತಮ್ಮ ಎಸ್ಯುವಿ ಕಾರಿನಲ್ಲಿ ಹೊರಟಿರುವ ಅವರು ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೆಸ್ಸಿ ಅವರು ನನ್ನ ಅಚ್ಚುಮೆಚ್ಚಿನ ಆಟಗಾರ. ಇದೀಗ ಸೌದಿ ಅರೇಬಿಯಾ ತಂಡದ ವಿರುದ್ದ ಅರ್ಜೆಂಟೀನಾ ಸೋತಿರುವುದು ತುಂಬಾ ಬೇಸರವಾಗಿದೆ. ಆದರೆ ಈ ತಂಡ ಮುಂದೆ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲಲಿದೆ ಎಂಬ ವಿಶ್ವಾಸವಿದೆ ಎಂದು ನಾಝಿ ಈ ವೇಳೆ ಹೇಲಿಕೊಂಡಿದ್ದಾರೆ.
ಇನ್ನು ಎಸ್ಯುವಿ ಕಾರಿನಲ್ಲಿ ಅವರು ವಿವಿಧ ಕೊಲ್ಲಿ ರಾಷ್ಟ್ರಗಳಿಗೂ ಪ್ರವಾಸ ಹಮ್ಮಿಕೊಂಡಿದ್ದಾರೆ. ಮಸ್ಕತ್, ಹೆಟ್ಟಾ ಬಾರ್ಡರ್ ಮುಖಾಂತರ ಪ್ರಯಾಣಿಸಿ ವಿಶ್ವದ ಅತೀ ಎತ್ತರದ ಬುರ್ಜ್ ಖಲೀಫಾ ಕಟ್ಟಡ ವೀಕ್ಷಣೆಗಾಗಿ ದುಬೈನಲ್ಲಿ ತಂಗಿದ್ದಾರೆ.
ಇನ್ನು ಏಕಾಂಗಿಯಾಗಿ ಕಾರಿನಲ್ಲಿ ದೀರ್ಘ ಪ್ರಯಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಅಡುಗೆ ಮನೆ, ಛಾವಣಿ ಮೇಲೆ ಟೆಂಟ್ ವ್ಯವಸ್ಥೆಯೂ ಇದೆ. ಊಟ ವಸತಿಗಾಗಿ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಹನಕ್ಕೆ ಊಲು ಎಂದು ಹೆಸರಿಟ್ಟುಕೊಂಡಿರುವ ಅವರು, ದೀರ್ಘ ಪ್ರಯಾಣಕ್ಕೆ ಬೇಕಾಗುವ ಅಕ್ಕಿ, ಮಸಾಲೆ ಸೇರಿದಂತೆ ಅವಶ್ಯಕ ಸಾಮಾಗ್ರಿಗಳನ್ನು ಕಾರಿನಲ್ಲಿ ಜೊತೆಗೇ ಕೊಂಡೊಯ್ದಿದ್ದಾರೆ.