ನವದೆಹಲಿ, ನ 25 (DaijiworldNews/DB): ಮಿಸ್ಟರ್ 360 ಎಂದೇ ಖ್ಯಾತರಾಗಿರುವ ಟೀಂ ಇಂಡಿಯಾ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ಹೆಸರು ಈಗ ವಿಶ್ವದ ಮೂಲೆಮೂಲೆಯಲ್ಲೂ ಪ್ರಸಿದ್ದಿಯಾಗಿದೆ. ಹೀಗಿರುವಾಗ ಆಸ್ಟ್ರೇಲಿಯಾದ ಸ್ಫೋಟಕ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಯಾದವ್ ಬಗ್ಗೆ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಮ್ಯಾಕ್ಸ್ವೆಲ್, ಸೂರ್ಯಕುಮಾರ್ ಅವರಂತಹ ಬ್ಯಾಟ್ಸ್ಮನ್ಗಳನ್ನು ಖರೀದಿಸುವಷ್ಟು ಹಣ ಬಿಗ್ ಬ್ಯಾಷ್ ಲೀಗ್ನಲ್ಲಿ ಇಲ್ಲ ಎಂದಿದ್ದಾರೆ. ತನ್ನ ಸ್ಪೋಟಕ ಬ್ಯಾಟಿಂಗ್ ಕೈಚಳಕದ ಮೂಲಕ ಕ್ರಿಕೆಟ್ ಕ್ಷೇತ್ರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರು ಮಾಡಿದ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮ್ಯಾಕ್ಸುವೆಲ್ ಹೇಳಿದ ಈ ಮಾತು ಟೀಂ ಇಂಡಿಯಾ ಅಭಿಮಾನಿಗಳು ಅಭಿಮಾನ ಪಡುವಂತೆ ಮಾಡಿದೆ.
ಮುಂದಿನ ದಿನಗಳಲ್ಲಿ ಬಿಗ್ ಬ್ಯಾಷ್ ಲೀಗ್ನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ನಾವು ನೋಡುತ್ತೇವೆಯೇ ಎಂದು ಸಂದರ್ಶಕರು ಕೇಳಿದ್ದಾರೆ. ಇದಕ್ಕೆ ಮ್ಯಾಕ್ಸುವೆಲ್ ಪ್ರತಿಕ್ರಿಯಿಸಿ, ಬಿಬಿಎಲ್ ಬಳಿ ಹಣ ಕಡಿಮೆಯಿದೆ. ಸೂರ್ಯಕುಮಾರ್ ಅವರಂತಹ ಬ್ಯಾಟ್ಸ್ಮನ್ಗಳನ್ನು ಖರೀದಿಸುವಷ್ಟು ಹಣ ಇಲ್ಲ ಎಂದಿದ್ದಾರೆ.
ಇನ್ನು ಸೂರ್ಯಕುಮಾರ್ ಯಾದವ್ ಅರವ ರನ್ ಸುರಿಮಳೆಗೆ ಇಡೀ ವಿಶ್ವವೇ ಬೆರಗಾಗಿದೆ. ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಜಗತ್ತಿನಲ್ಲೇ ನಂಬರ್ 1 ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಎದುರಿನ ತಂಡದ ಬೌಲರ್ಗಳಿಗೆ ಯಾದವ್ ಬ್ಯಾಟಿಂಗ್ ಸವಾಲಾಗಿದೆ.