ಮುಂಬೈ, ನ 19 (DaijiworldNews/DB): ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ಗೇ ಅಭಿಯಾನ ಅಂತ್ಯಗೊಳಿಸಿದ ಬೆನ್ನಿಗೇ ಟಿ20 ವಿಶ್ವಕಪ್ಗೆ ಈಗಿಂದಲೇ ಪ್ರಯೋಗಗಳನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಇದರ ಭಾಗವಾಗಿ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ರದ್ದು ಮಾಡಿದೆ.
ಕಳೆದೊಂದು ವರ್ಷದಿಂದ ಈ ಆಯ್ಕೆ ಸಮಿತಿ ಬಗ್ಗೆ ಹಲವಾರು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಭಾರತ ಫೈನಲ್ಗೇರದ್ದಕ್ಕೆ ಹಿರಿಯ ಕ್ರೀಡಾಪಟುಗಳನ್ನೇ ಆಯ್ಕೆ ಮಾಡುತ್ತಿರುವುದಕ್ಕೂ ಹಲವರು ಅಪಸ್ವರ ಎತ್ತಿದ್ದರು. ಏಕದಿನ ಪಂದ್ಯದಂತೆಯೇ ಟಿ20 ವಿಶ್ವಕಪ್ನಲ್ಲಿಯೂ ಆಡಲಾಗುತ್ತಿದೆ. ಯುವ ಆಟಗಾರರು ಹಲವರಿದ್ದರೂ ಅವರಿಗೆ ಮಣೆ ಹಾಕಲಾಗುತ್ತಿಲ್ಲ ಎಂಬ ಅಸಮಾಧಾನವೂ ಕ್ರಿಕೆಟ್ ಪ್ರೇಮಿಗಳಿಂದ ವ್ಯಕ್ತವಾಗಿತ್ತು. ಈ ಎಲ್ಲಾ ಅಸಮಾಧಾನಗಳ ಹಿನ್ನೆಲೆಯಲ್ಲಿ ಮುಂದಿನ ವಿಶ್ವಕಪ್ಗೆ ಎರಡು ವರ್ಷಗಳಿರುವಾಗಲೇ ಬಿಸಿಸಿಐ ಮೇಜರ್ ಸರ್ಜರಿಗೆ ಮುಂದಾಗಿದೆ. ಅದರಂತೆ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿ ಹೊಸದಾಗಿ ಅರ್ಜಿ ಆಹ್ವಾನಿಸಿದೆ.
ಇನ್ನು ಟೀಂ ಇಂಡಿಯಾದ ನಾಯಕತ್ವದಲ್ಲಿಯೂ ಬದಲಾವಣೆ ಮಾಡಲು ಬಿಸಿಸಿಐ ಉದ್ದೇಶಿಸಿದೆ ಎಂದೂ ಹೇಳಲಾಗುತ್ತಿದೆ. ಮೂರು ಮಾದರಿಯ ಪಂದ್ಯಗಳಿಗೆ ಮೂವರು ನಾಯಕರನ್ನು ಪ್ರತ್ಯೇಕವಾಗಿ ನೇಮಿಸಲು ಬಿಸಿಸಿಐ ಯೋಜಿಸಿದೆ. ಅಲ್ಲದೆ, ಹೊಸ ಆಯ್ಕೆ ಸಮಿತಿಯೇ ಈ ಮೂವರನ್ನೂ ನೇಮಕ ಮಾಡಲಿದೆ ಎನ್ನಲಾಗಿದೆ. ಪ್ರಸ್ತುತ ಮೂರೂ ಮಾದರಿಯ ಪಂದ್ಯಗಳನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ವಿರಾಮದಲ್ಲಿರುವ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಟಿ20 ತಂಡದ ನಾಯಕತ್ವದ ಹೊಣೆಗಾರಿಕೆ ಪಾಂಡ್ಯಾರದ್ದಾಗುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.