ಮೆಲ್ಬೋರ್ನ್, ನ 13 (DaijiworldNews/DB): ಐಸಿಸಿ ಟಿ20 ವಿಶ್ವಕಪ್ನ ಅಂತಿಮ ಪಂದ್ಯ ಇಂದು (ಭಾನುವಾರ) ಮೆಲ್ಬೋರ್ನ್ನಲ್ಲಿ ನಡೆಯಲಿದ್ದು, ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಎರಡು ತಂಡಗಳಲ್ಲಿ ವಿನ್ನರ್ ಪಟ್ಟ ಯಾರ ಮುಡಿಗೇರಲಿದೆ ಎಂಬ ಕುತೂಹಲದಲ್ಲಿ ಕ್ರಿಕೆಟ್ ಪ್ರೇಮಿಗಳಿದ್ದಾರೆ.
2009ರಲ್ಲಿ ಪಾಕಿಸ್ತಾನ ಹಾಗೂ 2010ರಲ್ಲಿ ಇಂಗ್ಲೆಂಡ್ ಟ್ರೋಫಿ ಜಯಿಸಿತ್ತು. ಅದೇ ತಂಡಗಳೆರಡು ಈ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದು, ಈ ಬಾರಿಯ ವಿನ್ನರ್ ಆಗಿ ಯಾವ ತಂಡ ಹೊರ ಹೊಮ್ಮಲಿದೆ ಎಂದು ಕಾದು ನೋಡಬೇಕಿದೆ.
ಎರಡು ಸೋಲುಗಳೊಂದಿಗೆ ಪಂದ್ಯ ಆರಂಭಿಸಿದ ಪಾಕಿಸ್ತಾನ ತಂಡವು ಭಾರತ ಮತ್ತು ಜಿಂಬಾಬ್ವೆ ವಿರುದ್ದ ಪರಾಭವಗೊಂಡು ಸೆಮಿ ಫೈನಲ್ನಿಂದ ಹೊರ ಬೀಳುವ ಆತಂಕದಲ್ಲಿತ್ತಾದರೂ ಬಳಿಕ ಮೂರು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶ ಮಾಡಿತು. ಇತ್ತ ಐರ್ಲೆಂಡ್ ವಿರುದ್ದ ಸೋಲನುಭವಿಸಿದ ಇಂಗ್ಲೆಮಡ್ ತಂಡವು ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ದ ಗೆದ್ದು ಸೆಮಿಫೈನಲ್ ತಲುಪಿತು. ಸೆಮಿಫೈನಲ್ನಲ್ಲಿ ಭಾರತವನ್ನು ಸೋಲಿಸಿ ಫೈನಲ್ಗೇರಿತು. ಇದೀಗ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ತಂಡದೊಂದಿಗೆ ಇಂಗ್ಲೆಂಡ್ ಕಾದಾಟ ನಡೆಸಲಿದೆ.
ಮಳೆ ಅಡ್ಡಿ?
ಇನ್ನು ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಮೆಲ್ಬೋರ್ನ್ನಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಭಾನುವಾರ ಮತ್ತು ಸೋಮವಾರ ಇಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಕೊನೆ ಕ್ಷಣದಲ್ಲಿ ಪಂದ್ಯ ಮುಂದೂಡಲ್ಪಡುವ ಸಾಧ್ಯತೆಯೂ ಇದೆ. ಭಾನುವಾರ ಮಳೆಯಿಂದಾಗಿ ಫೈನಲ್ ಪಂದ್ಯ ಆಡುವುದು ಅಸಾಧ್ಯವಾದಲ್ಲಿ ಸೋಮವಾರವನ್ನು ಮೀಸಲು ದಿನವನ್ನಾಗಿ ಇಡಲಾಗಿದೆ. ಆದರೆ ಅಂದೂ ಮಳೆಯಾದಲ್ಲಿ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ ಎಂದು ತಿಳಿದು ಬಂದಿದೆ.