ಲಂಡನ್, ಸೆ 26 (DaijiworldNews/DB): ಭಾರತ ಮತ್ತು ಇಂಗ್ಲೆಂಡ್ ನಡುವಿನ ವನಿತೆಯರ ಕ್ರಿಕೆಟ್ ಪಂದ್ಯಾಟದ ವೇಳೆ ದೀಪ್ತಿ ಶರ್ಮ ಮಾಡಿದ ರನೌಟ್ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ಆದರೆ ದೀಪ್ತಿ ಶರ್ಮಾ ಮಾಡಿದ್ದು ಸರಿಯಾಗಿಯೇ ಇದೆ ಎನ್ನುವ ಮೂಲಕ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಟೀಕಾಕಾರರ ಬಾಯ್ಮುಚ್ಚಿಸಿದ್ದಾರೆ.
ದೀಪ್ತಿ ಶರ್ಮಾ ರನೌಟ್ ಮಾಡಿರುವುದು ಸರಿಯಾಗಿಯೇ ಇದೆ. ಖಂಡಿತವಾಗಿಯೂ ಅದು ಅಪರಾಧವಲ್ಲ. ಕ್ರಿಕೆಟಿನ ಒಂದು ಭಾಗವೇ ಆಗಿದ್ದು, ಐಸಿಸಿ ನಿಯಮಾವಳಿಗೆ ಬದ್ದವಾಗಿದೆ ಎಂದು ಹರ್ಮನ್ ಹೇಳಿದ್ದಾರೆ.
ದೀಪ್ತಿ ಶರ್ಮಾ ಸರಿಯಾದ ಆಟವನ್ನೇ ಆಡಿದ್ದು, ನಾನು ಇದರಿಂದ ಖುಷಿ ಪಟ್ಟಿದ್ದೇನೆ. ಟೀಕಾಕಾರರು ಟೀಕಿಸಿದಾಗ ನಮ್ಮ ಆಟಗಾರ್ತಿಯರನ್ನು ಬೆಂಬಲಿಸುವುದು ನನ್ನ ಕರ್ತವ್ಯ ಎಂದವರು ತಿಳಿಸಿದ್ದಾರೆ.
ಆಟದ ಅಂತಿಮ ಹಂತದಲ್ಲಿ44ನೇ ಓವರ್ ಎಸೆಯಲು ಆಗಮಿಸಿದ್ದ ದೀಪ್ತಿ ಶರ್ಮ 3ನೇ ಎಸೆತದಲ್ಲಿ ಚಾರ್ಲೋಟ್ ಡೀನ್ ಅವರನ್ನು ’ಮಂಕಡ್’ ಮಾದರಿಯಲ್ಲಿ ರನೌಟ್ ಮಾಡಿದರು. ದೀಪ್ತಿ ಚೆಂಡು ಎಸೆಯುವ ಮುನ್ನವೇ ಡೀನ್ ನಾನ್ ಸ್ಟ್ರೈಕಿಂಗ್ ತುದಿಯಲ್ಲಿದ್ದ ಕ್ರೀಸ್ ಬಿಟ್ಟು ತುಂಬಾ ಮುಂದಿದ್ದರು. ಆಗ ಮೈದಾನದ ಅಂಪಾಯರ್ಗಳಾದ ಅನ್ನಾ ಹ್ಯಾರಿಸ್ ಮತ್ತು ಮೈಕ್ ಬರ್ನ್ಸ್ ತೀರ್ಪು ನೀಡದೆ ಥರ್ಡ್ ಅಂಪಾಯರ್ ಗೆ ಬಿಟ್ಟುಕೊಟ್ಟರು. ಥರ್ಡ್ ಅಂಪಾಯರ್ಗಳು ಔಟ್ ತೀರ್ಪು ನೀಡುವ ಮೂಲಕ ಭಾರತ ತಂಡ ಸಂಭ್ರಮಿಸಿದರೆ, ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.