ದುಬೈ, ಸೆ 08 (DaijiworldNews/DB): ಏಷ್ಯಾಕಪ್ನ ಸೂಪರ್-4 ಹಂತದ 5ನೇ ಪಂದ್ಯದಲ್ಲಿ ಮೈದಾನದಲ್ಲಿ ಪಾಕ್-ಅಪ್ಘಾನ್ ತಂಡಗಳು ಸೆಣಸಾಡಿದರೆ, ಸ್ಟೇಡಿಯಂನಲ್ಲಿ ಉಭಯ ತಂಡಗಳ ಅಭಿಮಾನಿಗಳು ಪರಸ್ಪರ ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆಯಿತು.
ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದೆದುರು ಅಪಘಾನಿಸ್ತಾನ ತಂಡವು ಸೋಲೊಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 6 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಲು ಶಕ್ತವಾಯಿತು.
19 ಓವರ್ ಮುಕ್ತಾಯದ ವೇಳೆಗೆ 9 ವಿಕೆಟ್ ಉರುಳಿಸಿದ ಅಫ್ಘಾನ್ ತಂಡ ಗೆಲ್ಲುವ ಎಲ್ಲಾ ನಿರೀಕ್ಷೆಗಳನ್ನು ತನ್ನದಾಗಿಸಿಕೊಂಡಿತ್ತು. ಪಾಕಿಸ್ತಾನ್ ತಂಡಕ್ಕೆ ಅಂತಿಮ ಓವರ್ನಲ್ಲಿ 11 ರನ್ಗಳ ಅವಶ್ಯಕತೆಯಿದ್ದರೆ, ಅಫ್ಘಾನಿಸ್ತಾನ್ ತಂಡಕ್ಕೆ ಕೇವಲ 1 ಒಂದು ವಿಕೆಟ್ ಅಗತ್ಯವಿತ್ತು. ಆದರೆ ಬಿರುಸಿನ ಪೈಪೋಟಿಯ ನಡುವೆಯೇ ಕೊನೆಯ ಓವರ್ನ ಮೊದಲ ಎರಡು ಎಸೆತಗಳಲ್ಲಿಯೇ ಪಾಕಿಸ್ತಾನ ತಂಡದ ನಸೀಮ್ ಶಾ ಭರ್ಜರಿ ಸಿಕ್ಸರ್ ಸಿಡಿಸಿದರು. ಆ ಮೂಲಕ ಜಯ ಪಾಕ್ ತಂಡದ್ದಾಯಿತು.
ಗೆಲುವು ಪಾಕಿಸ್ತಾನ ತಂಡದ್ದೆಂದು ಖಚಿತವಾದ ಕೂಡಲೇ ಸ್ಟೇಡಿಯಂನಲ್ಲಿ ಕುಳಿತಿದ್ದ ಪಾಕ್ ಅಭಿಮಾನಿಗಳು ಸಂಭ್ರಮದಲ್ಲಿ ತೇಲಾಡತೊಡಗಿದರು. ಈ ಸಂಭ್ರಮದ ನಡುವೆಯೇ ಅಪ್ಘಾನ್ ಅಭಿಮಾನಿಗಳನ್ನು ಪಾಕ್ ಅಭಿಮಾನಿಗಳು ತುಚ್ಛವಾಗಿ ಕಂಡಿದ್ದಾರೆ ಎನ್ನಲಾಗಿದೆ. ಇದರಿಂದ ಅಫ್ಘಾನ್ ತಂಡದ ಅಭಿಮಾನಿಗಳು ಕೆರಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಟೇಡಿಯಂನಲ್ಲಿದ್ದ ಕುರ್ಚಿಗಳನ್ನು ಕಿತ್ತು ಪಾಕ್ ಅಭಿಮಾನಿಗಳ ಮೇಲೆ ಎಸೆದಿದ್ದಾರೆ. ಇತ್ತಂಡಗಳ ಅಭಿಮಾನಿಗಳು ಕೈ ಕೈ ಮಿಲಾಯಿಸಿಕೊಂಡ ಘಟನೆಗೆ ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಯಿತು.
2019 ರ ವಿಶ್ವಕಪ್ ವೇಳೆಯೂ ಅಫ್ಘಾನಿಸ್ತಾನ್ ಹಾಗೂ ಪಾಕ್ ತಂಡಗಳ ಅಭಿಮಾನಿಗಳು ಸ್ಟೇಡಿಯಂನಲ್ಲೇ ಕಿತ್ತಾಡಿಕೊಂಡಿದ್ದರು ಎನ್ನಲಾಗಿದೆ.