ದುಬೈ, ಸೆ 07 (DaijiworldNews/DB): ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸುವುದರೊಂದಿಗೆ ಏಷ್ಯಾ ಕಪ್ನಿಂದ ಬಹುತೇಕ ಹೊರ ಬಿದ್ದಿದೆ. ಕೆಲವೇ ತಂಡಗಳ ವಿರುದ್ದದ ಫಲಿತಾಂಶ ತನ್ನ ಪರವಾಗಿದ್ದಲ್ಲಿ ಮಾತ್ರ ಭಾರತ ಫೈನಲ್ ಪ್ರವೇಶಿಸುವುದಕ್ಕೆ ಸಾಧ್ಯವಾಗಲಿದೆ.
ಏಷ್ಯಾ ಕಪ್ ಟೂರ್ನಿಯಲ್ಲಿ ನಿನ್ನೆ ಶ್ರೀಲಂಕಾ-ಭಾರತ ನಡುವೆ ನಡೆದ ಸೆಣಸಾಟದಲ್ಲಿ ಶ್ರೀಲಂಕಾ 6 ವಿಕೆಟ್ಗಳೊಂದಿಗೆ ಭಾರತದ ವಿರುದ್ದ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಶ್ರೀಲಂಕಾ ತಂಡವು 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ174 ರನ್ ಗಳಿಸಿ ರೋಚಕ ಗೆಲುವು ತನ್ನದಾಗಿಸಿಕೊಂಡಿತು.
ಆರಂಭಿಕವಾಗಿ ನಿಧಾನಗತಿಯಲ್ಲಿ ಲಂಕಾ ಬ್ಯಾಂಟಿಂಗ್ ಆರಂಭಿಸಿತ್ತು. ಆ ಮೂಲಕ 4 ಓವರ್ಗಳಿಗೆ 22 ರನ್ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆದರೆ ಬಳಿಕ ಬಿರುಸಿನ ಬ್ಯಾಟಿಂಗ್ ಮಾಡಿದ ಲಂಕಾ ತಂಡ ಪವರ್ ಪ್ಲೇ ಮುಗಿಯುವ ವೇಳೆಗೆ ಅರ್ಧ ಶತಕ ರನ್ ಗಡಿ ದಾಟಿತ್ತು.
ಆರಂಭಿಕ ಆಟಗಾರರಾಗಿದ್ದ ಪಾತುಂ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ ಭಾರತದ ಬೌಲರ್ಗಳ ಬೆವರಿಳಿಸುವಂತೆ ಬ್ಯಾಟಿಂಗ್ ಮಾಡಿದರು. ಪಾತುಂ ನಿಸ್ಸಾಂಕ 37 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಸೇರಿ 52 ರನ್ ಗಳಿಸಿದರು. ಇನ್ನು ಕುಸಾಲ್ ಮೆಂಡಿಸ್ 37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿ 57 ರನ್ ದಾಖಲಿಸಿದರು. ಬಳಿಕ ನಾಲ್ಕು ವಿಕೆಟ್ಗಳನ್ನು ಲಂಕಾ ತಂಡ ಕಳೆದುಕೊಂಡಿತು. ಕುಸಾಲ್ ಬಳಿಕ ಲಂಕಾ ತಂಡ ಸ್ವಲ್ಪ ಹಿನ್ನಡೆ ಅನುಭವಿಸಿತ್ತಾದರೂ ಬಳಿಕ ಭಾರತ ತಂಡಕ್ಕೆ ಉತ್ತಮ ಪೈಪೋಟಿ ನೀಡಿತ್ತು.
ಆರಂಭಿಕ ಆಟಗಾರರಾದ ಪಥುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಅವರ ಅರ್ಧತತಕ ಹಾಗೂ ಕೊನೆ ಹಂತದಲ್ಲಿ ಭಾನುಕ ರಾಜಪಕ್ಷ ಮತ್ತು ದಾಸುನ್ ಶನಕ ಅವರ ಬಿರುಸಿನ ಆಟದಿಂದಾಗಿ ಶ್ರೀಲಂಕಾ ತಂಡವು ಭಾರತ ತಂಡವನ್ನು ಮಣಿಸಿತು.
ಫೈನಲ್ ಹಾದಿ ಕಠಿಣ
ಇದು ಸೂಪರ್ ಫೋರ್ ಹಂತದಲ್ಲಿ ಭಾರತಕ್ಕೆ ಎರಡನೇ ಸೋಲಾಗಿದ್ದು, ಈ ಹಿಂದೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದೆದುರು ಸೋತಿತ್ತು. ಆ ಮೂಲಕ ಫೈನಲ್ನಲ್ಲಿ ಆಡುವ ಭಾರತದ ಆಸೆಯ ಹಾದಿ ಕಠಿಣವಾಗಲಿದೆ. ಇಂದು ಪಾಕ್ ಮತ್ತು ಅಪ್ಘಾನ್ ತಂಡಗಳ ಮಧ್ಯೆ ಸೆಣಸಾಟ ನಡೆಯಲಿದ್ದು, ಪಾಕ್ ಗೆದ್ದಲ್ಲಿ ಫೈನಲ್ಗೆ ಹೋಗಲಿದೆ. ಆದರೆ ಪಾಕ್ ಸೋತಲ್ಲಿ ಭಾರತಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಅಪ್ಘಾನಿಸ್ತಾನ ತಂಡದ ಗೆಲುವಿನ ಮೇಲೆ ಭಾರತ ತಂಡದ ಫೈನಲ್ಗೇರು ಭವಿಷ್ಯ ನಿಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.