ಸೋಫಿಯಾ (ಬಲ್ಗೇರಿಯಾ), ಆ 21 (DaijiworldNews/DB): ಬಲ್ಗೇರಿಯಾದಲ್ಲಿ ನಡೆದ ಜೂನಿಯರ್ ವರ್ಲ್ಡ್ ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪ್ರತಿಭಾನ್ವಿತ ಕುಸ್ತಿಪಟು ಅಂತಿಮ್ ಪಂಘಲ್ ಚಿನ್ನದ ಪದಕ ಗೆದ್ದಿದ್ದಾರೆ. ವನಿತೆಯರ 53 ಕೆಜಿ ವಿಭಾಗದಲ್ಲಿ ಅವರು ಬಂಗಾರಕ್ಕೆ ಕೊರಳೊಡ್ಡಿದ್ದಾರೆ.
ಅಂತಿಮ ಪಂದ್ಯದ ಹಣಾಹಣಿಯಲ್ಲಿ ಕಜಾಕ್ಸ್ಥಾನದ ನ್ ಶಗಯೇವಾ ಅವರನ್ನು 8-0 ಅಂತರದಿಂದ ಸೋಲಿಸಿ ಅಂತಿಮ್ ಪಂಘಲ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಆ ಮೂಲಕ ಈ ಕೂಟದ ಇತಿಹಾಸದಲ್ಲಿ 34 ವರ್ಷಗಳ ನಂತರ ಭಾರತದ ಮಹಿಳಾ ಕುಸ್ತಿಪಟುವೊಬ್ಬರು ಬಂಗಾರ ಗೆದ್ದ ಹೆಮ್ಮೆ ಅವರದಾಗಿದೆ. ಸೋನಮ್ ಮಲಿಕ್ (62 ಕೆಜಿ) ಮತ್ತು ಪ್ರಿಯಾಂಕಾ (65 ಕೆಜಿ) ಬೆಳ್ಳಿ ಪದಕ ಗಳಿಸಿದ್ದಾರೆ.
ಅಂತಿಮ್ ಅವರು ಮೊದಲ ಸುತ್ತಿನಲ್ಲಿ ಯುರೋಪಿಯನ್ ಚಾಂಪಿಯನ್ ಒಲಿವಿಯಾ ಆಯಂಡ್ರಿಚ್ ಅವರನ್ನು 11-0 ಅಂತರದಿಂದ ಸೋಲಿಸಿ, ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಅಯಾಕಾ ಕಿಮುರಾ ಅವರನ್ನು, ಸೆಮಿಫೈನಲ್ನಲ್ಲಿ ಉಕ್ರೇನ್ನ ನಟಾಲಿಯಾ ಕಿವುಸ್ಕಾ ಅವರನ್ನು ಮಣಿಸಿ ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರು. ಅಂತಿಮ ಸುತ್ತಿನಲ್ಲಿ ಅಂಡರ್-20 ಏಷ್ಯನ್ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಶಗಯೇವಾರನ್ನು ಮಣಿಸಿದರು.
ಟ್ಯುನೀಶಿಯಾದಲ್ಲಿ ಕಳೆದ ತಿಂಗಳು ನಡೆದ ಕುಸ್ತಿ ಸ್ಪರ್ಧೆಯಲ್ಲೂ ಅಂತಿಮ್ ಚಿನ್ನ ಗೆದ್ದಿದ್ದರು. ಸೋಫಿಯಾ ಕೂಟದಲ್ಲಿ ಇದುವರೆಗೆ ಒಂದು ಚಿನ್ನ, 3 ಬೆಳ್ಳಿ ಮತ್ತು 8 ಕಂಚು ಸೇರಿ ಭಾರತ ಒಟ್ಟು 12 ಪದಕ ತನ್ನದಾಗಿಸಿಕೊಂಡಿದೆ.