ಜಿಂಬಾಬ್ವೆ, ಆ 19 (DaijiworldNews/DB): ನಿನ್ನೆ ನಡೆದ ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಗಳಿಸಿದೆ. ಆದರೆ ಇದಕ್ಕೂ ಹೆಚ್ಚು ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿರುವುದು ಟೀಂ ಇಂಡಿಯಾ ನಾಯಕ ಕೆ.ಎಲ್. ರಾಹುಲ್ ನಡೆದುಕೊಂಡ ರೀತಿ.
ಹೌದು ಸರಣಿ ಆರಂಭಕ್ಕೂ ಮುನ್ನ ಎರಡೂ ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ಹಾಡಿ ಗೌರವ ಸಲ್ಲಿಸುವ ಸಂದರ್ಭ. ರಾಷ್ಟ್ರಗೀತೆ ಮೊಳಗುವುದಕ್ಕೂ ಮುನ್ನ ಚೂಯಿಂಗಮ್ ತಿನ್ನುತ್ತಿದ್ದ ತಂಡದ ನಾಯಕ ಕೆ.ಎಲ್. ರಾಹುಲ್, ಇನ್ನೇನು ರಾಷ್ಟ್ರಗೀತೆ ಶುರುವಾಗಲಿದೆ ಎನ್ನುವುದಕ್ಕೂ ಮುನ್ನ ತಮ್ಮ ಬಾಯಲ್ಲಿದ್ದ ಅರ್ಧ ತಿಂದ ಚೂಯಿಂಗಮ್ನ್ನು ತೆಗೆದು ಡಸ್ಟ್ಬಿನ್ಗೆ ಹಾಕಿದ್ದಾರೆ. ಟೀಂ ಇಂಡಿಯಾ ನಾಯಕನ ಈ ನಡೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ. ಸದ್ಯ ಜಾಲತಾಣಗಳಲ್ಲಿ ರಾಹುಲ್ ಅವರು ಚೂಯಿಂಗಮ್ನ್ನು ಬಾಯಿಯಿಂದ ತೆಗೆದು ಡಸ್ಟ್ಬಿನ್ಗೆ ಹಾಕುತ್ತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಆಟಗಾರರೂ ರಾಹುಲ್ ರೀತಿ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಐಪಿಎಲ್ ನಂತರ ಕಾಲು ನೋವಿನ ಕಾರಣದಿಂದಾಗಿ ಕೆ.ಎಲ್. ರಾಹುಲ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರಲಿಲ್ಲ. ಆ ಬಳಿಕ ಇದೇ ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ದ ಕಣಕ್ಕಿಳಿದಿದ್ದು, ಮರಳಿ ತಂಡವನ್ನು ಸೇರ್ಪಡೆಗೊಂಡಿದ್ದಾರೆ.