ಮುಂಬಯಿ, ಆ 18 (DaijiworldNews/DB): ನಾನೀಗ ನಿರುದ್ಯೋಗಿ. ಬಿಸಿಸಿಐ ನೀಡುವ ಪಿಂಚಣಿ ಹಣದಿಂದಲೇ ಕುಟುಂಬ, ಜೀವನ ನಿರ್ವಹಣೆ ಮಾಡುತ್ತಿದ್ದೇನೆ ಎಂದು ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಹೇಳಿದ್ದಾರೆ.
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಸಹಪಾಠಿ ಗೆಳೆಯ ಎಂದೇ ಟ್ಯಾಗ್ಲೈನ್ ಹೊಂದಿರುವ ಕಾಂಬ್ಳಿ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮಗೆ ಯಾವುದೇ ಉದ್ಯೋಗವಿಲ್ಲ ಎಂಬುದನ್ನು ನೋವಿನಿಂದ ಹೇಳಿಕೊಂಡಿದ್ದಾರೆ. ಕ್ರಿಕೆಟ್ನಿಂದ ಹಿಂದೆ ಸರಿದ ಬಳಿಕ ಸಚಿನ್ ತೆಂಡೂಲ್ಕರ್ ಅವರ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಕಾರಣಾಂತರಗಳಿಂದ ಆ ಕೆಲಸವನ್ನು ತ್ಯಜಿಸಬೇಕಾಗಿ ಬಂತು. ಬಳಿಕ ಯಾವುದೇ ಸೂಕ್ತವಾದ ಕೆಲಸ ಸಿಕ್ಕಿಲ್ಲ. ಸದ್ಯ ನಿರುದ್ಯೋಗಿಯಾಗಿಯೇ ಇದ್ದೇನೆ. ಬಿಸಿಸಿಐ ತಿಂಗಳಿಗೆ 30 ಸಾವಿರ ರೂ. ಪಿಂಚಣಿ ನೀಡುತ್ತಿದ್ದು, ಅದೇ ಹಣದಲ್ಲಿ ಜೀವನ ಸಾಗುತ್ತಿದೆ ಎಂದಿದ್ದಾರೆ.
ಸಚಿನ್ಗೆ ನನ್ನ ಪರಿಸ್ಥಿತಿ ಬಗ್ಗೆ ತಿಳಿದಿದೆ. ಆದರೆ ಅವರಿಂದ ನಾನು ಯಾವುದೇ ಸಹಾಯವನ್ನೂ ನಿರೀಕ್ಷಿಸುವುದಿಲ್ಲ. ಅವರು ನನ್ನ ಬಾಲ್ಯ ಸ್ನೇಹಿತ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದು ನನಗೆ ಇಷ್ಟದ ಕೆಲಸವಾಗಿದ್ದು, ಅಂತಹ ಕೆಲಸ ಸಿಕ್ಕಿದ್ದಲ್ಲಿ ಸಂತೋಷದಿಂದ ನಿರ್ವಹಿಸುತ್ತೇನೆ ಎನ್ನುತ್ತಾರೆ ಕಾಂಬ್ಳಿ.
ಸಚಿನ್ ಮೊದಲ ಬಾರಿಗೆ ಕಾಂಬ್ಳಿಯೊಂದಿಗೆ ನಡೆಸಿದ ಸುದೀರ್ಘ ಬ್ಯಾಟಿಂಗ್ ಜೊತೆಯಾಟದ ಮೂಲಕ ಸುದ್ದಿಯಾದರು. ಆ ಬಳಿಕ ಸಚಿನ ಜಾಗತಿಕ ಮಟ್ಟದಲ್ಲಿ ದೊಡ್ಡ ಆಟಗಾರನಾಗಿ ಮಿಂಚಿದರೆ, ಕಾಂಬ್ಳಿ ಕ್ರಿಕೆಟ್ನಿಂದ ಮರೆಗೆ ಸರಿದರು.