ನವದೆಹಲಿ, ಆ 17 (DaijiworldNews/DB): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಇಂದು 2027ರವರೆಗಿನ ಕ್ರಿಕೆಟ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕ್ರಿಕೆಟ್ ಆಟಗಾರರನ್ನು ಆತಂಕಕ್ಕೀಡು ಮಾಡಿದೆ. ಇದಕ್ಕೆ ಕಾರಣ ಮುಂದಿನ ಐದು ವರ್ಷಗಳಲ್ಲಿ ಬರೋಬ್ಬರಿ 777 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿರುವುದು.
2023-27ರ ಐದು ವರ್ಷಗಳಲ್ಲಿ ಒಟ್ಟು 777 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಈ ಪೈಕಿ 2 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2 ಏಕದಿನ ವಿಶ್ವಕಪ್, 2 ಟಿ 20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಕೂಡ ನಡೆಯುತ್ತವೆ. 151 ಟೆಸ್ಟ್ಗಳು, 241 ಏಕದಿನ ಪಂದ್ಯಗಳು ಮತ್ತು 301 ಟಿ20 ಪಂದ್ಯಗಳು ಕಳೆದ ಅವಧಿಯಲ್ಲಿದ್ದವು. ಆದರೆ ಈ ಐದು ವರ್ಷಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿದ್ದು, 173 ಟೆಸ್ಟ್, 281 ಏಕದಿನ, 326 ಟಿ20 ಪಂದ್ಯಗಳು ಐಸಿಸಿ ಬಿಡುಗಡೆ ಮಾಡಿದ ಲಿಸ್ಟ್ನಲ್ಲಿದೆ. ಆ ಮೂಲಕ 22 ಟೆಸ್ಟ್, 40 ಏಕದಿನ ಮತ್ತು 25 ೧ಇ20 ಪಂದ್ಯಗಳು ಕಳೆದ ಅವಧಿಗಿಂತ ಈ ಅವಧಿಯಲ್ಲಿ ಹೆಚ್ಚಿವೆ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಈಗಾಗಲೇ ಸಂಕಷ್ಟ ಪಡುತ್ತಿರುವ ಕ್ರಿಕೆಟ್ ಆಟಗಾರರು ಇದೀಗ ಸಂಖ್ಯೆಗಳ ಏರಿಕೆಯಿಂದಾಗಿ ಹೈರಾಣಾಗಿದ್ದಾರೆ.
ಟೀಂ ಇಂಡಿಯಾಗೆ 183 ಪಂದ್ಯ!
ಮುಂದಿನ ಐದು ವರ್ಷಗಳ ಮಟ್ಟಿಗೆ ಟೀಂ ಇಂಡಿಯಾಕ್ಕೆ ಬಿಡುವೇ ಇಲ್ಲದಂತಾಗುವುದು ಖಚಿತ. ಏಕೆಂದರೆ 2023-27ರ ಐದು ವರ್ಷಗಳಲ್ಲಿ ಟೀಂ ಇಂಡಿಯಾ ಒಟ್ಟು 183 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೆಣಸಾಡಬೇಕಿದೆ.
44 ಟೆಸ್ಟ್, 63 ಏಕದಿನ ಮತ್ತು 76 ಟಿ20 ಪಂದ್ಯದಲ್ಲಿ ಆಡಲು ಟೀಂ ಇಂಡಿಯಾ ಆಟಗಾರರು ಸಜ್ಜಾಗಬೇಕಿದೆ. ಆ ಮೂಲಕ ಐದು ವರ್ಷಗಳಲ್ಲಿ ಪ್ರತಿ ತಿಂಗಳೂ ಮೈದಾನಕ್ಕಿಳಿಯುವುದು ಟೀಂ ಇಂಡಿಯಾಗೆ ಅನಿವಾರ್ಯವಾಗಲಿದೆ. 2024ರ ಆಗಸ್ಟ್ನಲ್ಲಿ ಮಾತ್ರ ಟೀಂ ಇಂಡಿಯಾಕ್ಕೆ ಯಾವುದೇ ಅಂತಾರಾಷ್ಟ್ರೀಯ ಸರಣಿ ಪ್ರಸ್ತುತ ವೇಳಾಪಟ್ಟಿಯಲ್ಲಿ ಇಲ್ಲ.