ಮುಂಬೈ, ಆ 16 (DaijiworldNews/DB): ವಿಶ್ವ ಫುಟ್ ಬಾಲ್ನ ಪ್ರಮುಖ ಸಂಸ್ಥೆ ಫಿಫಾವು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ಮಂಗಳವಾರ ಅಮಾನತುಗೊಳಿಸಿ ಆದೇಶಿಸಿದೆ. ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಫಿಫಾ ಈ ನಿರ್ಧಾರ ಕೈಗೊಂಡಿದೆ.
ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವವು ಫಿಫಾ ಕಾಯಿದೆಗಳ ಗಂಭೀರ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ಫಿಫಾ ಕೌನ್ಸಿಲ್ನ ಬ್ಯೂರೋವು ಸರ್ವಾನುಮತದಿಂದ ಅಮಾನತು ನಿರ್ಧಾರವನ್ನು ಪ್ರಕಟಿಸಿದೆ ಎಂದು ವರದಿಯಾಗಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಕಾರ್ಯಕಾರಿ ಸಮಿತಿಯ ಅಧಿಕಾರ ವಹಿಸಿಕೊಳ್ಳಲು ನಿರ್ವಾಹಕರ ಸಮಿತಿ ರಚಿಸುವ ಆದೇಶ ರದ್ದತಿಯ ಬಳಿಕ ಮತ್ತು ಎಐಎಫ್ಎಫ್ ಆಡಳಿತವು ಸಂಸ್ಥೆಯ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದುಕೊಳ್ಳಬೇಕು. ಆ ನಂತರವಷ್ಟೇ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಫಿಫಾ ಆಡಳಿತ ತಿಳಿಸಿದೆ.
ಅಕ್ಟೋಬರ್ 11ರಿಂದ 30ರ ವರೆಗೆ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ನ್ನು ಭಾರತದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಇದೀಗ ಫಿಫಾವು ಎಐಎಫ್ಎಫ್ನ್ನು ಅಮಾನತುಗೊಳಿಸಿದರಿಂದ ಈ ಆಯೋಜನೆಯನ್ನೂ ನಡೆಸುವುದು ಸಾಧ್ಯವಿಲ್ಲದ ಕಾರಣ ಮಹಿಳಾ ವಿಶ್ವಕಪ್ ಭಾರತದಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲಿದೆ ಎಂದು ತಿಳಿದು ಬಂದಿದೆ.