ನವದೆಹಲಿ, ಆ 14 (DaijiworldNews/DB): ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಸತತ ಎರಡು ಬಾರಿಯೂ ಪದಕ ವಂಚಿತವಾದ ಕಾರಣ ಕುಸ್ತಿಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ಆದರೆ ಪ್ರಧಾನಿ ಜೊತೆಗಿನ ಮಾತುಕತೆ ಬಳಿಕ ಕ್ರೀಡಾಸ್ಫೂರ್ತಿ ಹೆಚ್ಚಾಯಿತು ಎಂದು ಕುಸ್ತಿ ಪಟು ವಿನೇಶ್ ಫೋಗಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಒಲಿಂಪಿಕ್ಸ್ ಕ್ರೀಡಾಪಟುವಿಗೆ ಅತಿದೊಡ್ಡ ವೇದಿಕೆ. ಆದರೆ ಮೊಣಕಾಲು ಗಾಯದಿಂದ ಎರಡು ಒಲಿಂಪಿಕ್ಸ್ನಲ್ಲಿಯೂ ಪದಕ ವಂಚಿತಳಾದೆ. ಹೀಗಾಗಿ ಕುಸ್ತಿಯನ್ನು ತ್ಯಜಿಸಬೇಕೆಂಬ ನಿರ್ಧಾರಕ್ಕೆ ಬಂದೆ. ಆದರೆ ಈ ನಿರಾಶೆಯಿಂದ ನಾನು ಹೊರ ಬಂದದ್ದೇ ಪ್ರಧಾನಿ ನರೇಂದ್ರ ಮೋದಿಯವರ ಮಾತಿನಿಂದ. ಪ್ರಧಾನಿಯನ್ನು ಭೇಟಿಯಾದಾಗ ನಿನ್ನ ಮೇಲೆ ನಂಬಿಕೆ ಇದೆ, ನೀನಿನ್ನೂ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದ್ದರು. ಬಹುಶಃ ಕುಸ್ತಿಯಲ್ಲಿ ಮತ್ತೆ ಹಳೆಯ ಉತ್ಸಾಹದೊಂದಿಗೆ ತೊಡಗಿಸಿಕೊಳ್ಳಲು ಅವರ ಈ ಮಾತುಗಳೇ ಸ್ಪೂರ್ತಿಯಾದವು ಎಂದು ಹೇಳಿದರು.
ನನ್ನ ಕುಟುಂಬ ಯಾವಾಗಲೂ ನನಗೆ ಬೆಂಬಲವಾಗಿಯೇ ಇರುತ್ತದೆ. ನನ್ನ ಸಾಮರ್ಥ್ಯದ ಮೇಲೆ ಅವರು ನಂಬಿಕೆ ಇಟ್ಟಿದ್ದರು ಎಂದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತೆ ಪೋಗಟ್ ತಿಳಿಸಿದರು.
2016 ರ ರಿಯೊ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್-ಫೈನಲ್ನಲ್ಲಿ ಮೊಣಕಾಲಿನ ಗಾಯದಿಂದಾಗಿ ವಿನೇಶ್ ಪೋಗಟ್ ಅವರಿಗೆ ಪದಕ ಕೈ ತಪ್ಪಿತ್ತು. ಇದು ಅವರನ್ನು ತೀವ್ರ ಕುಗ್ಗುವಂತೆ ಮಾಡಿತ್ತು. ಆದರೆ ಇತ್ತೀಚೆಗೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೆ ಪ್ರದರ್ಶಿಸಿದ್ದರು.