ತಮಿಳುನಾಡು, ಆ 10 (DaijiworldNews/DB): ತಮಿಳುನಾಡಿನ ಮಹಾಬಲೀಪುರದಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕಂಚಿನ ಪದಕ ಗಳಿಸಿವೆ.
ಉಜ್ಬೇಕಿಸ್ತಾನ್ ವಿರುದ್ಧ ನಡೆದ ಪಂದ್ಯದಲ್ಲಿ ಬಿ ತಂಡವು ಚಿನ್ನದ ಅವಕಾಶ ತಪ್ಪಿಸಿಕೊಂಡಿತು. 11ನೇ ಪಂದ್ಯದಲ್ಲಿ ಯುಎಸ್ ವಿರುದ್ಧ ಸೋಲುವ ಮೂಲಕ ಭಾರತದ ಮಹಿಳಾ ತಂಡ ಕಂಚಿಗೆ ತೃಪ್ತಿ ಪಟ್ಟುಕೊಂಡಿತು. ಡಿ. ಗುಕೇಶ್ , ಆರ್. ಪ್ರಗ್ನಾನಂದ , ನಿಹಾಲ್ ಸರಿನ್, ರೌನಕ್ ಸಾಧ್ವನಿ, ಬಿ ಅಧಿಬನ್ ಮತ್ತು ಕೊನೇರು ಹಂಪಿ, ಆರ್. ವೈಶಾಲಿ ಅವರು ಕಂಚಿನ ಪದಕ ಗಳಿಸಿದರು.
ಪದಕ ಗಳಿಸಿದ ಕುರಿತು ಮಾತನಾಡಿದ ಕೊನೇರು ಹಂಪಿ, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವುದು ಸಾಧ್ಯವಾಗದಿದ್ದರೂ, ಪದಕ ಗೆಲ್ಲುವುದು ಸಾಧನೆಯೇ. ಮಹಿಳೆಯರಿಗೆ ಮೊದಲ ಒಲಿಂಪಿಯಾಡ್ ಪದಕ ಸಿಕ್ಕಿರುವುದು ಖುಷಿ ತಂದಿದೆ ಎಂದರು.
ಮುಕ್ತ ವಿಭಾಗದಲ್ಲಿ ಡಿ. ಗುಕೇಶ್ ಮತ್ತು ಆರ್. ಪ್ರಗ್ನಾನಂದರನ್ನು ಒಳಗೊಂಡ ಭಾರತ-ಬಿ ತಂಡ ಜರ್ಮನಿಯನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. ಆದರೆ ಭಾರತ-ಎ ತಂಡ ಅಂತಿಮ ಸುತ್ತಿನಲ್ಲಿ ಯುಎಸ್ಎ ವಿರುದ್ಧ ಸೆಣಸಾಡಿ ಪದಕ ವಂಚಿತವಾಯಿತು. ಒಲಿಂಪಿಯಾಡ್ನಲ್ಲಿ ಭಾರತಕ್ಕೆ ಇದು ಎರಡನೇ ಕಂಚಿನ ಪದಕವಾಗಿದೆ. ಇದಕ್ಕೂ ಮೊದಲು 2014 ರಲ್ಲಿ ಭಾರತಕ್ಕೆ ಪದಕ ಲಭಿಸಿತ್ತು.