ಬರ್ಮಿಂಗ್ಹ್ಯಾಮ್, ಜು 28 (DaijiworldNews/DB): 22ನೇ ಆವೃತ್ತಿಯ ಕಾಮನ್ವೆಲ್ತ್ ಕ್ರೀಡಾಕೂಟ ಇಂದಿನಿಂದ ಆರಂಭವಾಗಲಿದ್ದು, ಸ್ಥಳೀಯ ಕಾಲಮಾನ ಸಂಜೆ 7ಕ್ಕೆ ವೈಭವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ಸಾಂಸ್ಕೃತಿಕ ಕಲಾ ವೈಭವ ಮೆರುಗು ನೀಡಲಿದೆ.
30,000ಕ್ಕೂ ಅಧಿಕ ಪ್ರೇಕ್ಷಕರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ರಾಜಕುಮಾರ್ ಚಾರ್ಲ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಬಹು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ಟೋನಿ ಲೊಮ್ಮಿ, ಸ್ಯಾಕ್ಸಾಫೋನ್ ವಾದಕ ಸೊವೆಟೊ ಕಿಂಚ್, ವಯೋಲಿನ್ ವಾದಕರಾದ ಮಾರ್ಷಲ್ ಮತ್ತು ಗ್ಯಾಂಬಿನಿ ಪ್ರೇಕ್ಷಕರಿಗೆ ಮನರಂಜನಾ ಕಾರ್ಯಕ್ರಮದ ರಸದೌತಣ ನೀಡಲಿದ್ದಾರೆ. ಡಿಜೆ ಔಡೆನ್ ಆಯಲೆನ್ ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಭಾರತದ 214 ಕ್ರೀಡಾಪಟುಗಳು ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ನೂರಕ್ಕೂ ಹೆಚ್ಚು ಪದಕ ಗೆಲ್ಲುವ ಗುರಿಯೊಂದಿಗೆ ಬರ್ಮಿಂಗ್ಹ್ಯಾಮ್ಗೆ ಸಾಗಿದ್ದಾರೆ. ಕಳೆದ ಬಾರಿ 26 ಚಿನ್ನ ಸೇರಿ ಒಟ್ಟು 66 ಪದಕ ಭಾರತೀಯರ ಪಾಲಾಗಿತ್ತು. 2010ರಲ್ಲಿ ನವದೆಹಲಿಯಲ್ಲಿ ಕ್ರೀಡಾಕೂಟ ನಡೆದಾಗ 38 ಚಿನ್ನ ಸೇರಿ ಒಟ್ಟು 101 ಪದಕಗಳನ್ನು ತವರಿನಲ್ಲೇ ಗೆಲ್ಲುವ ಮೂಲಕ ಭಾರತೀಯರು ಅತಿದೊಡ್ಡ ಸಾಧನೆಯನ್ನು ಮಾಡಿದ್ದು ಪ್ರಸ್ತುತ ಸ್ಮರಣೀಯ.