ಮುಂಬೈ, ಏ 16 (DaijiworldNews/DB): ಭಾರತದ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರಿಗೆ ವಿದೇಶಗಳಲ್ಲಿಯೂ ಅಭಿಮಾನಿಗಳಿರುವುದು ಗೊತ್ತಿರುವ ವಿಷಯವೇ. ಆದರೆ ವಿದೇಶೀ ಮಾಜಿ ಕ್ರಿಕೆಟಿಗನೊಬ್ಬನ ಅಭಿಮಾನ ಅದಕ್ಕಿಂತಲೂ ಭಿನ್ನವಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನೊಬ್ಬ ಸಚಿನ್ ಕಾಲಿಗೆ ನಮಸ್ಕರಿಸಿ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಬುಧವಾರ ಐಪಿಎಲ್ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಮುಗಿದ ಬಳಿಕ ಎರಡೂ ತಂಡಗಳು ಪರಸ್ಪರ ಹಸ್ತಲಾಘವ ಮಾಡಿಕೊಳ್ಳುವ ವೇಳೆ ಸಚಿನ್ಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ದೊಡ್ಡವರಾಗಿರುವ ಜಾಂಟಿ ರೋಡ್ಸ್ ಸಚಿನ್ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ಸಚಿನ್ ತಡೆಯಲೆತ್ನಿಸಿದರೂ, ಅವರು ನಮಸ್ಕರಿಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಜಾಂಟಿ ರೋಡ್ಸ್ ಅವರ ಈ ಅಭಿಮಾನವನ್ನು ನೆಟ್ಟಿಗರು ಪ್ರಶಂಸಿದ್ದಾರೆ. 2009ರಿಂದ 2017ರ ವರೆಗೆ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಸಚಿನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದ್ಯ ಅವರು ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
ಇನ್ನು ಈತನಿಗೆ ಭಾರತದ ಮೇಲಿರುವ ಪ್ರೀತಿ ಅನನ್ಯವಾದುದು. ತನ್ನ ಮಗಳಿಗೆ `ಇಂಡಿಯಾ’ ಎಂದು ಹೆಸರಿಟ್ಟಿರುವುದು ಇಲ್ಲಿ ನೆನಪಿಸಿಕೊಳ್ಳಬಹುದು.