ಚೆನ್ನೈ, ಮಾ. 24 (DaijiworldNews/SM): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕನಾಗಿ ೧೨ ಆವೃತ್ತಿಗಳನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಜವಾಬ್ದಾರಿಯನ್ನು ರವೀಂದ್ರ ಜಡೇಜಾ ಅವರ ಹೆಗಲಿಗೆ ನೀಡಿದ್ದಾರೆ.
ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಎಂ.ಎಸ್. ಧೋನಿ ಈ ಮಹತ್ವದ ನಿರ್ಣಯಕ್ಕೆ ಬಂದಿದ್ದಾರೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಿದೆ. ಅಲ್ಲದೆ ರವೀಂದ್ರ ಜಡೆಜಾ ಅವರು ಪ್ರಸ್ತುತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಪ್ರ್ಯಾಂಚೈಸಿ ಸ್ಪಷ್ಟಪಡಿಸಿದೆ.
ಎಂ ಎಸ್ ಧೋನಿಯವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಬಾರಿ ಐಪಿಎಲ್ ಗೆದ್ದುಕೊಂಡಿದೆ. ಅಲ್ಲದೆ, ಇಲ್ಲಿಯ ತನಕ ನಡೆದ ಎಲ್ಲಾ ವಿಭಾಗಗಳಲ್ಲಿ ಸಿಎಸ್ ಕೆ ಸ್ಥರ ಪ್ರದರ್ಶನವನ್ನು ನೀಡುತ್ತಾ ಬಂದಿದೆ. ತಾನು ಭಾಗವಹಿಸಿದ ಟೂರ್ನಿಯಲ್ಲಿ ಒಂದು ಆವೃತ್ತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಆವೃತ್ತಿಯಲ್ಲಿಯೂ ಸಿಎಸ್ಕೆ ಪ್ಲೇಆಫ್ಗೆ ಪ್ರವೇಶ ಪಡೆದಿರುವುದು ಧೋನಿ ನಾಯಕತ್ವದ ಹೆಗ್ಗಳಿಕೆಯಾಗಿದೆ.
"ರವೀಂದ್ರ ಜಡೇಜಾ 2012ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಫ್ರಾಂಚೈಸಿಯನ್ನು ಮುನ್ನಡೆಸಲಿರುವ ಕೇವಲ ಮೂರನೇ ಆಟಗಾರನಾಗಲಿದ್ದಾರೆ. ಇನ್ನು ಧೋನಿಯವರು ಈ ಬಾರಿಯ ಐಪಿಎಲ್ ಮಾತ್ರವಲ್ಲದೆ ಮುಂದಿನ ಟೂರ್ನಿಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿಎಸ್ ಕೆ ಅಧಿಕೃತ ಮಾಹಿತಿ ನೀಡಿದೆ.