ಮೊಹಾಲಿ, ಮಾ. 06 (DaijiworldNews/SM): ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಶಿಯೇಷನ್ ಐಎಸ್ ಬಿಂದ್ರ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಹಾಗೂ 222 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಭರ್ಜರಿ ಮೊತ್ತ ಪೇರಿಸಿತ್ತು. ಎಂಟು ವಿಕೆಟ್ ಗಳ ನಷ್ಟಕ್ಕೆ 574 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತದ ಪರ ರವೀಂದ್ರ ಜಡೇಜಾ 175 ರನ್ ಸಿಡಿಸಿ ಏಳನೇ ಕ್ರಮಾಂಕದಲ್ಲಿ ಮಿಂಚಿದ್ದರು. ಉಳಿದಂತೆ ಹನುಮ ವಿಹಾರಿ 58, ಪಂತ್ 96, ವಿರಾಟ್ ಕೊಹ್ಲಿ 45, ಅಶ್ವಿನ್ 61 ರನ್ ಸಿಡಿಸಿದ್ದರು.
ಇನ್ನು ಭಾರತ ನೀಡಿದ ಗುರಿ ಬೆನ್ನಟ್ಟಿದ ಲಂಕಾ ಪಡೆಗೆ ಟೀಂ ಇಂಡಿಯಾ ಬೌಲರ್ ಗಳು ಇನ್ನಿಲದಂತೆ ಕಾಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 174 ಗಳಿಗೆ ಸರ್ವ ಪತನ ಕಂಡು ಎರಡನೇ ಇನ್ನಿಂಗ್ಸ್ ಕೂಡ ಲಂಕಾ ಪಡೆಗೆ ಸವಾಲಾಗಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ 178 ರನ್ ಸಿಡಿಸಿ ಕೊನೆಗೂ ಸೋಲೊಪ್ಪಿಕೊಂಡಿತು.
ಇನ್ನು ಭಾರತದ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮಿಂಚಿದರು. ಶತಕ ಸಿಡಿಸಿದ್ದು ಒಂದೆಡೆಯಾದರೆ, ಬೌಲಿಂಗ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 5 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ಸೈ ಎಣಿಸಿಕೊಂಡರು. ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ ಎರಡು ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರು. ಶಮಿ ಒಟ್ಟು ಮೂರು ವಿಕೆಟ್ ಪಡೆದರು. ಬೂಮ್ರಾ ಎರಡು ವಿಕೆಟ್ ಪಡೆದರು.