ಜೊಹನ್ಸ್ ಬರ್ಗ್, ಜ. 06 (DaijiworldNews/SM): ಇಲ್ಲಿ ನಡೆದ ಭಾರತ ಹಾಗೂ ದ. ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾ ತಂಡ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿದ್ದು, ಮುಂದಿನ ಪಂದ್ಯ ಕುತೂಹಲವನ್ನುಂಟು ಮಾಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 27 ರನ್ ಮುನ್ನಡೆ ಕಾಯ್ದುಕೊಂಡಿರುವ ದ. ಆಫ್ರಿಕಾಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 266 ರನ್ ಗಳ ಸವಾಲು ನೀಡಿತು.
ಈ ಗುರಿ ಬೆನ್ನಟ್ಟಿದ ದ. ಆಫ್ರಿಕಾ ತಂಡ ಮೂರನೇ ದಿನದಾಟದಂತ್ಯಕ್ಕೆ, 40 ಓವರ್ ಗಳಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 118 ರನ್ ಗಳಿಸಿತು ಸುಸ್ಥಿತಿಯಲ್ಲಿತ್ತು. ನಾಲ್ಕನೇ ದಿನ ದ. ಆಫ್ರಿಕಾ ತಂಡಕ್ಕೆ ಗೆಲ್ಲಲು 122 ರನ್ ಗಳು ಮಾತ್ರ ಬೇಕಿತ್ತು. ಆರಂಭದಲ್ಲಿ ತೇವದಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿತ್ತು. ಈ ವೇಳೆ ಭಾರತೀಯ ತಮ್ಮ ಬೌಲರ್ ಗಳ ಮೇಲೆ ವಿಶ್ವಾಸವನ್ನಿಟ್ಟುಕೊಂಡಿದ್ದರು. ಸ್ಪಿನ್ ಆಟ ನಡೆಯುತ್ತದೆ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ, ಟೀಂ ಇಂಡಿಯಾ ಬೌಲರ್ ಗಳ ಯಾವೊಂದು ಆಟವೂ ದ.ಆಫ್ರಿಕಾ ತಂಡದ ಮುಂದೆ ನಡೆಯಲಿಲ್ಲ.
ನಾಲ್ಕನೇ ದಿನ ಮೂರು ವಿಕೆಟ್ ಗಳ ನಷ್ಟಕ್ಕೆ 243 ರನ್ ಗಳಿಸುವ ಮೂಲಕ ದ.ಆಫ್ರಿಕಾ ಏಳು ವಿಕೆಟ್ ಗಳ ಅಂತರದ ಗೆಲುವು ದಾಖಲಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 63.1 ಓವರ್ ಗಳಲ್ಲಿ 202 ರನ್ ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ನಾಯಕ ಕೆ.ಎಲ್. ರಾಹುಲ್ 50, ಮಾಯಾಂಕ್ ಅಗರ್ವಾಲ್ 26, ಅಶ್ವಿನ್ 46 ರನ್ ಗಳಿಸಿದರು. ಅಂತಿಮವಾಗಿ 202 ರನ್ ಗಳಿಗೆ ಸರ್ವ ಪತನಗೊಂಡಿತು.
ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ದ. ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 229 ರನ್ ಗಳಿಸಿತು.