ನವದೆಹಲಿ, ಡಿ.25 (DaijiworldNews/PY): "ಭಾರತ ಕ್ರಿಕೆಟ್ ತಂಡವನ್ನು ವಿರಾಟ್ ಕೊಹ್ಲಿಯಂತೆ ಯಶಸ್ವಿಯಾಗಿ ಮುನ್ನಡೆಸಿದ ಯಾವ ನಾಯಕನೂ ಇಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ಬಿಸಿಸಿಐ ನಾಯಕತ್ವದ ವಿಷಯವನ್ನು ಉತ್ತಮವಾಗಿ ಬಗೆಹರಿಸಬಹುದಿತ್ತು" ಎಂದು ಮಾಜಿ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ನಾಯಕ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ ಎನ್ನುವುದು ಅಪ್ರಸ್ತುತ. ಈ ಬಗ್ಗೆ ಸ್ವಲ್ಪ ಯೋಚಿಸಿ ಬಗೆಹರಿಸಿದ್ದಲ್ಲಿ ಉತ್ತಮವಾಗಿರುತ್ತಿತ್ತು" ಎಂದಿದ್ದಾರೆ.
"ರೋಹಿತ್ ಶರ್ಮಾ ಅವರನ್ನು ಸೀಮಿತ ಓವರ್ಗಳ ನಾಯಕರಾಗಿ ನೇಮಕ ಮಾಡಿದ ಹಿನ್ನೆಲೆ ಟಿ-20 ನಾಯಕತ್ವದಿಂದ ಕೆಳಗಿಳಿಯದಂತೆ ಈ ಹಿಂದೆ ಕೊಹ್ಲಿಗೆ ತಾವು ಸಲಹೆ ನೀಡಿದ್ದಾಗಿ, ಆದರೆ, ಅವರು ನನ್ನ ಮಾತನ್ನು ಕೇಳಲಿಲ್ಲ" ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ, "ಗಂಗೂಲಿ ಅವರು ಈ ಬಗ್ಗೆ ನನ್ನೊಂದಿಗೆ ಸಮಾಲೋಚನೆ ನಡೆಸಿಲ್ಲ. ಆದರೆ, ಬಿಸಿಸಿಐ ಅಧ್ಯಕ್ಷರಿಂದ ಈ ರೀತಿಯಾದ ಮಾತನ್ನು ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ.
"ವಿರಾಟ್ ಕೊಹ್ಲಿ ಅವರಷ್ಟು ಸಮರ್ಪಣಾ ಮನೋಭಾವದಿಂದ ತಂಡವನ್ನು ಮುನ್ನಡೆಸಿದ ನಾಯಕರೂ ಯಾರೂ ಇಲ್ಲ. ಕೊಹ್ಲಿಯೊಂದಿಗೆ ನಾನು ಬಹಳ ಸಮಯ ಪ್ರಯಾಣಿಸಿದ್ದೇನೆ. ಅವರೊಂದಿಗಿನದ ಬಾಂಧವ್ಯ ಅದ್ವಿತೀಯ" ಎಂದು ಹೇಳಿದ್ದಾರೆ.